ಸಾಲುಗಳು
ಹರಿಯುವ,
ತುಂಬಿಕೊಳ್ಳುವ
ಭರವಸೆ
ಅಂತರ್ಜಲ-
ವಿರುವವರೆಗೆ...
ಹರಿಯುವ,
ತುಂಬಿಕೊಳ್ಳುವ
ಭರವಸೆ
ಅಂತರ್ಜಲ-
ವಿರುವವರೆಗೆ...
.
ಕನ್ನಡಿಗೆ ಕುಕ್ಕಿ ಕುಕ್ಕಿ
ಹಕ್ಕಿಯ ಭ್ರಮೆ ಹರಿಯಲಿಲ್ಲ
ಕಣ್ಣು ಕುರುಡಾಯಿತು.
ಅಜ್ಜಿ
ಸಿಕ್ಕಿತೊ ಬಿಟ್ಟಿತೊ
ಮನೆಯಲ್ಲಿ
ಕಳೆದಿದ್ದು
ಬಯಲಲ್ಲಿ ಹುಡುಕಿದಳಲ್ಲ
ಮೊಮ್ಮಗಳು
ಈಗ
ಸಿಕ್ಕಿತು ಎನ್ನುತ್ತಿದ್ದಾಳೆ.
ಕಿಟಕಿ ಸೀಳಿನಲ್ಲಿ
ಕಾಣಿಸುವ ಬಯಲು
ಮಿಥ್ಯೆ
ಎನ್ನಲು
ಮನಸ್ಸು
ಒಪ್ಪುತ್ತಿಲ್ಲ.
ಕವಿ
ದೀಪ, ಬೆಳಕು
ಗಂಧಕ್ಕೆ
ಪದೇ ಪದೇ
ತಿರುಗಿಕೊಳ್ಳುವಂತೆ
ನನಗೆ
ಗದ್ದೆ ಹಸಿರಿನ
ಗೀಳಂತೆ!
ದೊರಗು ನಾಲಿಗೆ
ಗಾಯ ನೆಕ್ಕುವ
ನೋವ
ಗುಣವಾಗುವ ಭರವಸೆ
ನುಂಗಿತು.
ಬಯಲಲ್ಲಿ
ಬೆತ್ತಲಾದಾಗ
ಅನುಭಾವದ
ಬಿತ್ತ
ತೇವ ಪಡೆಯುತ್ತೆ.
(ಪ್ರಸಾದ್ ವಿ ಮೂರ್ತಿಯವರ ಸಾಲುಗಳ ನೆನೆಯುತ್ತ...)
ಅಸಂಖ್ಯ
ಸಲ
ತಪ್ಪುಮಾಡಿದ
ಆಡಂ ಮತ್ತು ಈವರು
ತಪ್ಪಿಸಿಕೊಂಡರು
ಪತ್ತೆ ಪೆರೇಡು
ನಡೆಯಿತು
ತಪ್ಪುಗಳೆಲ್ಲ
ಒಂದೇ ತರ ಕಂಡರು
ಹೊಟ್ಟೆಯಲ್ಲಿ
ಹೊಕ್ಕಳರಳಿರದ
ಇಬ್ಬರನ್ನು ಬಿಟ್ಟು!
ಅಡುಗೆಗೆ ನೆನೆಹಾಕಿದರೂ
ಮೊಳೆಯುವ
ಕಾಳಿನ
ಮುಗ್ಧತೆ-
ಗೆ
ಮನುಷ್ಯನ
ಜಾಣತನ-
ಕ್ಕೆ
ಶರಣು.
ಪ್ರಾಣವಾಯು ಹೀರಿ
ಧಗಧಗಿಸಿ ಉರಿದು
ಬೂದಿಯಾಗಿ
ತೂರಿಹೋಗುವ
ಉಮೇದಿಗೆ
ಉಸಿರುಗಟ್ಟಿ
ಗುರುತಿನ
ಗೆರೆ ಚುಕ್ಕೆ ಮೂಡಿಸುವ
ಇದ್ದಿಲು ಚೂರಾಯಿತು.
ಅಮ್ಮ ಕೊಟ್ಟ ರುಪಾಯಿ
ದಾರಿಯಲ್ಲಿ
ಕಳೆದು ಹೋಯಿತು
ಮುಂದಕ್ಕೊ
ಹಿಂದಕ್ಕೊ
ಅಂತ
ಯೋಚಿಸುವುದರಲ್ಲಿ
ಜಾತ್ರೆ
ಬಂದೇ ಬಿಟ್ಟಿತಲ್ಲ!
ಕತ್ತಲಲ್ಲೂ
ಓದಲಾಗುವ ಬ್ರೈಲ್ ಬರುವುದಿಲ್ಲ
ಸನ್ನೆ ಭಾಷೆ ಅರ್ಥವಾಗುವುದಿಲ್ಲ
ಎಷ್ಟೋ ಜನ ಸ್ಪಷ್ಟವಾಗಿ
ಮಾತಾಡಿದರೂ
ಉತ್ತರಿಸಲು ಬರುವುದಿಲ್ಲ
ನಾನೂ
ಅಂಗವಿಕಲ.
-ಆಧಾರ
***
No comments:
Post a Comment