ಸಾಲುಗಳು
1.
ನಾಕೇ ಗೆರೆ ಏನನ್ನೋ ಹೇಳಹೊರಡುತ್ತದಾದರೆ
ಖಾಲಿ ಹಾಳೆಯದೂ ಎರಡು ಮಾತಿರಬಹುದು.
2.
ಈ
ಚಂದ್ರಕಾಂತಿಯೊ
ಕ್ರಾಂತಿಯೊ
ಪರಾಗಸ್ಪರ್ಷ
ಪರಕೀಯವೇ ಇರಲಿ
ಎಂದು
ಅಂಗಲಾಚುತ್ತಿದೆ.
3.
ಬದುಕು
ಚಲಿಸುವ ವಾಹನ
ಇಳಿದ ಪ್ರಯಾಣಿಕ-
ನಂತೆ
ಸ್ವಲ್ಪ ದೂರ ಓಡುತ್ತೆ,
ನಿಲ್ಲೋಕ್ಮುಂಚೆ
ಅಥ್ವಾ
ಬೀಳೋಕ್ಮುಂಚೆ...
4.
ಬಯಲು ಸಹಜ ಚಂದ
ಬಂಧಿಸಿಟ್ಟಿದ್ದು
ಭ್ರಮೆ!
5.
ಕತ್ತಲಿಗೆ
ಹೊಂದಿಕೊಂಡ ಕಣ್ಣು,
ಉನ್ನತಿಯಲ್ಲಿ
ಹೊಳೆಯದ ಎಷ್ಟೊಂದು
ಅಧೋಗತಿಯಲ್ಲಿ!
6.
ಓ
ಈ
ಫೇಸ್ ಬುಕ್ಕಿನಲ್ಲಿ
ಅವಿತಿರುವ
ಮಹಾ ಕಾಲಯಂತ್ರವೇ
ನಿನಗೆ ನಮಸ್ಕಾರ
ಯಾರು ಎಷ್ಟುಹೊತ್ತಿಗೆ
ಮೆಚ್ಚಿದರು
ಕಮೆಂಟಿಸಿದರು
ಸ್ಟೇಟಸ್ಸು ಮೇಲೆತ್ತಿದರು
ಇತ್ಯಾದಿಗಳನ್ನೂ
ಯಾವ್ಯಾವುದಾಗಿ
ಎಷ್ಟೆಷ್ಟು ಹೊತ್ತಾಯ್ತು
ಎಂಬುದನ್ನೂ
ಕರಾರುವಾಕ್ ಲೆಕ್ಕಹಾಕುತ್ತಾ
ಮರೆತು ಓಡುವ ನಮಗೆ
ಒಪ್ಪಿಸುವ ನಿನಗೆ...
7.
ಒಮ್ಮೊಮ್ಮೆ
ಶಮನ ಮಾಡುವ ವಿಶ್ವಾಸ
ನೋವು ಕೊಡುವ ಹಂಬಲ
ಕೈ ಕೈ ಹಿಡಿದು ಸಾಗುತ್ತವೆ.
***
No comments:
Post a Comment