Monday 2 September 2013

ಹರೇಕಳದ ಹಾಜಬ್ಬ ಹೈಸ್ಕೂಲ್ ಕಟ್ಟಿದ್ದು





ಇದು ರಸ್ತೆಯ ಬದಿಯಲ್ಲಿ ಕಿತ್ತಳೆ ಮಾರುವ ಅನಕ್ಷರಸ್ಥನೊಬ್ಬ ಆಧುನಿಕ ಹೈಸ್ಕೂಲೊಂದನ್ನು ಕಟ್ಟಿದ ಕಥೆ.

ನಮ್ಮ ಊರಿನ ಮೇಲೆ ಅತ್ಯಂತ ಹೆಚ್ಚು ಪ್ರೀತಿ ಇದ್ದರೆ ಅದೇನು ಮಾಡಬಹುದು? ಹೀಗೊಂದು ಪ್ರಶ್ನೆ ಇದ್ದರೆ ನಮ್ಮ ಮುಂದೆ ಒಂದೋ ಎರಡೋ ಸೀಮಿತ ಆಯ್ಕೆಗಳು ಬರಬಹುದು. ನಮ್ಮ ಸಂಘದ ವತಿಯಿಂದ ಒಂದು ರಸ್ತೆ ಮಾಡಿಸಿಕೊಟ್ಟೇವು, ರಕ್ತದಾನ ಶಿಬಿರ ಏರ್ಪಡಿಸಿಬಿಡೋಣ ಎನ್ನುವವರೂ ಇರಬಹುದು, ಕ್ಷಯರೋಗ ಆಸ್ಪತ್ರೆಯಲ್ಲಿನ ಬಡ ಕ್ಷೀಣ ಹಾಸಿಗೆಗಂಟಿದ ಜೀವಗಳಿಗೆ ಹಣ್ಣು ಹಂಪಲು ಕೊಡೋಣ ಎಂದು ಕ್ಲಬ್ಬಿನವರು ಹೇಳಬಹುದು, ಉತ್ಸಾಹೀ ತರುಣರು ಮುಂದುವರಿದು ಹೊನಲು ಬೆಳಕಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟವನ್ನೂ ಆಡಿಸಿಯಾರು! ಆದರೆ ನಮ್ಮ ಊರಿಗೊಂದು ಶಾಲೆ ಕೊಡಿಸೋಣ ಎಂದು ನಿರ್ಧರಿಸಿಯೇ ಬಿಟ್ಟು ಅದಕ್ಕಾಗಿ ಮೂರ್‍ನಾಲ್ಕು ವರ್ಷ ಭಗೀರಥ ಪ್ರಯತ್ನ ಮಾಡೋದೆಂದರೆ!

ಕೇವಲ ಆರೇಳು ವರ್ಷದ ಹಿಂದೆ ಮಂಗಳೂರಿನ ಹಳೆ ಬಸ್‌ಸ್ಟಾಂಡಲ್ಲಿ ಮೊಳಕಾಲಿನಿಂದ ಸ್ವಲ್ಪ ಕೆಳಗಿನವರೆಗೆ ಬರುವ ‘ಕುಪ್ಪಾಯ’ ಉಟ್ಟುಕೊಂಡು, ಮೇಲೊಂದು ಬಿಳಿಯ ಸಾದಾ ಅಂಗಿ ಧರಿಸಿಕೊಂಡು ಸಣಕಲು ವ್ಯಕ್ತಿಯೊಂದು ಕಿತ್ತಳೆ ಮಾರುತ್ತಿತ್ತು. ಅಂದು ಇವರನ್ನು ಕಂಡು ಮೂಗು ಮುರಿಯುತ್ತಿದ್ದವರು ಈಗ ಗೌರವ ಕೊಡಲು ಮರೆಯೋದಿಲ್ಲ. ವಯಸ್ಸು ಸುಮಾರು ೬೦ರ ಹತ್ತಿರ ಬರುವ ಈ ಹರೇಕಳ ಹಾಜಬ್ಬರನ್ನು ಒಮ್ಮೆ ಆತ್ಮೀಯತೆಯಿಂದ ಮಾತನಾಡಿಸಿದರೆ ಏನಿಲ್ಲವೆಂದರೂ ಬಾಯ್ತುಂಬಾ ಹಾರೈಕೆಗಳಾದರೂ ಸಿಕ್ಕೇ ಸಿಗುತ್ತವೆ. ಈ ಹಾಜಬ್ಬ ಇಂದಿಗೂ ಕಿತ್ತಳೆ ವ್ಯಾಪಾರಿಯೇ ಆಗಿ ಉಳಿದಿದ್ದಾರೆ. ಆದರೆ ಅವರಿಂದಾಗಿ ಅವರ ಊರಿಗೆ ಸಿಕ್ಕ ಕೊಡುಗೆಗಳು ಮಾತ್ರ ಅಪಾರ!

ಅಂದ ಹಾಗೆ ಯಾರೀ ಹಾಜಬ್ಬ? ಮಂಗಳೂರಿಂದ ಕೊಣಾಜೆ, ಮಂಗಳಗಂಗೋತ್ರಿ ದಾರಿಯಾಗಿ ಮುಂದುವರಿದಾಗ ಸಿಗುವ ಊರು ಹರೇಕಳ. ಇಲ್ಲಿನ ಎಲ್ಲರಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ಮನಸ್ಸು ಮಾತ್ರ ಹಗುರ. ಗುರಿ ಅಚಲ. ಬದುಕು ತುಂಬಾನೇ ಸರಳ. ಮಂಗಳೂರಿನ ಹಂಪನಕಟ್ಟೆ ಬಸ್ಟಾಂಡಲ್ಲಿ ಬುಟ್ಟಿ ಹಿಡಿದು ಕಿತ್ತಳೆ ಮಾಡುವ ಈ ವ್ಯಕ್ತಿಗೂ ಅಕ್ಷರದ ಕನಸುಗಳು ಬಿದ್ದದ್ದು ಅಚ್ಚರಿ. ಅಕ್ಷರವೇ ಬಾರದ ಈ ಸಣಕಲು ಮನುಷ್ಯ ಮೊದಲು ಮದರಸಾದಲ್ಲಿ ಕೆಲಸದಲ್ಲಿದ್ದವರು. ಅಕ್ಷರ ಬಾರದೆ ಕಷ್ಟಪಡುತ್ತಿದ್ದಾಗ ಹಾಜಬ್ಬ ನಿರ್ಧರಿಸಿಬಿಟ್ಟರು-ನನ್ನ ಹಾಗೆ ನನ್ನ ಊರಿನ ಮಕ್ಕಳು ಕಷ್ಟಬರಬಾರದು. ಹರೇಕಳ ನ್ಯೂಪಡ್ಪುವಿನ ಪರಿಸರದಲ್ಲಿ ಶಾಲೆಗಳಿಲ್ಲ ಎಂದಲ್ಲ. ಇದ್ದದ್ದು ಖಾಸಗಿ ಶಾಲೆಗಳು. ಅದಕ್ಕೆ ಹೋಗಲು ಬಡ ಮಕ್ಕಳಿಗೆ ಸಾಧ್ಯ ಇಲ್ಲ. ಹಾಗಾಗಿ ಸರ್ಕಾರಿ ಶಾಲೆಯೇ ಬೇಕು ಎಂದ ಹಾಜಬ್ಬ ಅಂದುಕೊಂಡದ್ದು ಮಾಡಲು ಟೊಂಕ ಕಟ್ಟಿಯೇ ಬಿಟ್ಟರು. ಯಾರು ಯಾರನ್ನೆಲ್ಲಾ ಕೇಳಿದರು, ಅರ್ಜಿ ಬರೆಸಿದರು, ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರು. ಮೊದಲೆಲ್ಲಾ ಈ ವ್ಯಕ್ತಿಯನ್ನು ಕಚೇರಿಯಲ್ಲಿ ಮಾತನಾಡಿಸುವರೇ ಇರಲಿಲ್ಲ.

ಎಲ್ಲಾ ನೋವುಗಳನ್ನು ನುಂಗಿದ ಇವರ ಹೋರಾಟಕ್ಕೆ ಫಲ ಸಿಕ್ಕಿದ್ದು ೧೯೯೯ರಲ್ಲಿ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ರೂಪದಲ್ಲಿ. ಮೊದಲು ಊರಿನ ಮದರಸಾದಲ್ಲೇ ಈ ಶಾಲೆ ನಡೆಯುತ್ತಿತ್ತು. ಇಷ್ಟಕ್ಕೇ ಹಾಜಬ್ಬ ನಿಲ್ಲಿಸಿಬಿಡಲಿಲ್ಲ. ಸ್ವಂತ ಕಟ್ಟಡ ಬೇಕು ಎಂಬುದೇ ಅವರ ಮುಂದಿನ ಗುರಿ. ಮಧ್ಯಾಹ್ನದವರೆಗೆ ಕಿತ್ತಳೆ ಮಾರಾಟ, ಕಾಕಾನ ಹೊಟೇಲಲ್ಲಿ ಒಂದು ಪರೋಟ, ಚಾ ಹೊಟ್ಟೆಗಿಳಿಸಿ, ಕಿತ್ತಳೆ ಮಾರಿದ ಹಣದಿಂದಲೇ ಖರ್ಚು ಮಾಡಿಕೊಂಡು ಮತ್ತೆ ಮುಂದುವರಿಯಿತು ನಿತ್ಯ ನಿರಂತರ ಯತ್ನ. ಶಾಲೆಗೆ ಜಾಗ ಸುಮ್ಮನೆ ಆದೀತೆ? ಅದಕ್ಕೆ ಸರ್ಕಾರಿ ಜಾಗ ಬೇಡವೇ. ನ್ಯೂಪಡ್ಪುವಿನಲ್ಲೆ ೪೦ ಸೆಂಟ್ಸ್ ಅತಿಕ್ರಮಿತ ಸ್ಥಳ ಇದ್ದದ್ದು ಶಾಲೆಗೆ ಮಂಜೂರು ಮಾಡಿಸುವಂತೆ ಹಾಜಬ್ಬ ಜಿಲ್ಲಾಧಿಕಾರಿಯಮನ್ನು ಒತ್ತಾಯಿಸುತ್ತಾ ಬಂದರು. ಕೆಲವೇ ಮಿತ್ರರು ಹಾಗೂ ದಾನಿಗಳ ನೆರವಿನಿಂದ ಗುಡ್ಡವನ್ನು ಜೆಸಿಬಿ ಯಂತ್ರದಿಂದ ಸಮತಟ್ಟು ಮಾಡಿದರು. ಕೊನೇಗೂ ಶಾಲೆ ಎದ್ದು ನಿಂತಿತು. ಮತ್ತೆ ಹೈಸ್ಕೂಲ್ ಬೇಕು ಎಂಬ ಹೋರಾಟ ಆರಂಭ! ತಮ್ಮ ಊರಲ್ಲಿ ಅಕ್ಷರ ಮಂದಿರ ಕಟ್ಟಲು ಹಾಜಬ್ಬರ ಯತ್ನಗಳೆಲ್ಲ ಸರ್ಕಾರಿ ಕಡತಗಳ ಧೂಳಿನ ಎಡೆಯಲ್ಲೇ ಮಸುಕಾಗಿ ಹೊರಜಗತ್ತಿಗೆ ಕಾಣದ ಪರಿಸ್ಥಿತಿ ಇತ್ತು. ಹೀಗಿದ್ದಾಗ ನೆರವಾದದ್ದು ಮಾಧ್ಯಮಗಳು ಮತ್ತು ಮಾಧ್ಯಮಗಳನ್ನು, ವರದಿಗಳನ್ನು ನೋಡಿ ಸ್ಪಂದಿಸಿದ ಉದಾರಿಗಳು. ಹಾಜಬ್ಬರ ಭಗೀರಥ ಪ್ರಯತ್ನದ ಫಲವಾಗಿ ನ್ಯೂಪಡ್ಪು ಶಾಲೆ ಈಗ ಹೈಸ್ಕೂಲ್ ಆಗಿದೆ.


ಶಾಲೆಗೊಂದು ಬಾವಿ ಬಂದಿದೆ. ಅದಕ್ಕೊಂದು ಪಂಪ್ ಕೂಡಾ ಸಿಕ್ಕಿದೆ. ಹಾಜಬ್ಬರ ಪ್ರಯತ್ನ ಮೆಚ್ಚಿ ರಾಜ್ಯದ ಹಲವು ಕಡೆಯಿಂದ ದಾನಿಗಳ ನೆರವು ಹರಿದುಬಂದಿದೆ. ಹಾಗೆಯೇ ವಿದ್ಯುತ್ ಸಂಪರ್ಕ ಶಾಲೆಗೆ ಸಿಕ್ಕಿದೆ. ಹಾಜಬ್ಬ ಫೇಮಸ್ಸಾದ ಬಳಿಕ ಕೆಲವರು ತಮ್ಮ ಪ್ರಚಾರಕ್ಕಾಗಿ ಕೆಲಸಕ್ಕೆ ಬಾರದ ವಸ್ತು ನೀಡಿದ್ದೂ ಇದೆ. ಸರ್ಕಾರಿ ಶಾಲೆಯಾದರೂ ತಮ್ಮದೇ ಶಾಲೆ ಎಂಬಷ್ಟು ಆರೈಕೆ ಹಾಜಬ್ಬರಿಗೆ. ಬೆಳಗ್ಗೆ ಎದ್ದು ಶಾಲೆಯ ಕಸ ಗುಡಿಸುವುದು, ಚಿಕ್ಕ ಟಾಂಕಿಗೆ ಬಾವಿಯಿಂದ ನೀರು ಹೊತ್ತು ತರುವುದು ಮಾಡುತ್ತಾ ಬಂದಿದ್ದಾರೆ, ಈಗ ಬಾವಿ, ಟಾಂಕಿ ಇದ್ದ ಕಾರಣ ಶ್ರಮ ಉಳಿದಿದೆ.

ತಮಗೆ ಅಕ್ಷರ ಬಾರದೆ ಪಟ್ಟ ಕಷ್ಟ ಊರಿನ ಮಕ್ಕಳಿಗೆ ಬರಬಾರದು ಎಂಬ ಒಂದೇ ಉದ್ದೇಶ ಇದ್ದದ್ದು ಹಾಜಬ್ಬರಲ್ಲಿ. ಅದೇ ಅವರಿಂದ ಇಷ್ಟು ಕೆಲಸ ಮಾಡಿಸಿದ ಪ್ರೇರಕಶಕ್ತಿ. ಅಕ್ಷರ ಬರದಿದ್ದರೂ ತಮ್ಮ ಪರಿಚಯದವರಿಂದ ವಿಸಿಟಿಂಗ್ ಕಾರ್ಡ್ ಕೇಳಿಪಡೆಯುತ್ತಾರೆ. ಯಾರಾದರೂ ಪರಿಚಯಸ್ಥರು ಸಿಕ್ಕರೆ ‘ನೋಡಿ ಸಾರು, ಇವರು ಉಪಕಾರ ಮಾಡಿದ್ದಾರೆ’ ಎನ್ನುತ್ತಾ ಕೇವಲ ನೆನಪಿನ ಬಲದಿಂದಲೇ, ಕಿಸೆಯಲ್ಲಿರುವ ದೊಡ್ಡ ವಿಸಿಟಿಂಗ್ ಕಾರ್ಡ್ ಸಂಗ್ರಹದ ಕಟ್ಟಿನಿಂದ ಸರಿಯಾದ ಕಾರ್ಡನ್ನೇ ತೆಗೆದು ತೋರಿಸಬಲ್ಲರು! ಶಾಲೆಯಲ್ಲಿ ಏನಾದರೂ ಸಮಾರಂಭವಾದಾಗ, ಅಥವಾ ಹೋದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ ಹಾಜಬ್ಬ ಎಂದರೆ ಹಾಜಬ್ಬ ಮೊದಮೊದಲು ಏನೂ ಹೇಳಲಾಗದೆ ಏನೋ ಹೇಳುತ್ತಿದ್ದರು. ಆದರೆ ಈಗ ತುಳು, ಕನ್ನಡ, ಬ್ಯಾರಿ ಪದಗಳನ್ನೆಲ್ಲಾ ಮಿಶ್ರಮಾಡಿ ತಮ್ಮ ಇಚ್ಛೆಗಳನ್ನು ಸಮರ್ಪಕವಾಗಿಯೇ ಮಂಡಿಸಲು ಕಲಿತಿದ್ದಾರೆ.

ಶಾಲೆಗೊಂದು ಮೈದಾನ ಆಗಬೇಕು, ಕಾಂಪೌಂಡ್ ನಿರ್ಮಿಸಬೇಕು ಎಂದು ಸೂಚ್ಯವಾಗಿ ಹೇಳುತ್ತಾರೆ. ಅದನ್ನು ನೋಡಿ ದಾನಿಗಳು ಮುಂದೆ ಬಂದರೆ ಹಾಜಬ್ಬರಿಗೆ ಖುಷಿ. ಅಕ್ಷರ ಕಲಿಯದಿದ್ದರೂ ಹಾಜಬ್ಬ ಹೆಬ್ಬೆಟ್ಟು ಒತ್ತುವುದಿಲ್ಲ, ಅವರಿಗೆ p ಮತ್ತು h ಎಂಬ ಇಂಗ್ಲಿಷ್‌ನ ಎರಡಕ್ಷರ ಯಾರೋ ಹೇಳಿಕೊಟ್ಟಿದ್ದಾರೆ. p ಎಂದರೆ ಪಂಜಿಮುಡಿ, ಹಾಜಬ್ಬರ ಮನೆಹೆಸರು. h ಎಂದರೆ ಹಾಜಬ್ಬ.ಮುಂಜಾನೆ ಎದ್ದು ಮನೆಗೆ ಬೇಕಾದ ಕೆಲಸ ಮಾಡಿಕೊಟ್ಟು, ಶಾಲೆಗೆ ತೆರಳಿ, ತರಗತಿಗಳನ್ನು ಗುಡಿಸಿ, ಟೀಚರ್, ಮಕ್ಕಳು ಬರಲು ಆರಂಭಿಸುತ್ತಿರುವಾಗ ಅಲ್ಲಿಂದ ಒಂಭತ್ತೆಕ್ಕೆಲ್ಲಾ ಹೊರಟು ಬಿಡುತ್ತಾರೆ ಹಾಜಬ್ಬ. ಮಾರ್ಕೆಟ್‌ಗೆ ಹೋಗಿ ರಖಂ ದರದಲ್ಲಿ ಕಿತ್ತಳೆ ಖರೀದಿಸಿ, ಮತ್ತೆ ಹಂಪನಕಟ್ಟೆಗೆ ಬಂದು ಅಂಗಡಿ ಅಂಗಡಿಗೆ ಹೋಗಿ ಮಾರುವುದು. ಪಾದಚಾರಿಗಳು, ಕಾರ್, ಟ್ಯಾಕ್ಸಿ ಚಾಲಕರು ಹಾಜಬ್ಬರ ಗಿರಾಕಿಗಳು.

ಹಾಜಬ್ಬ ಮನಸ್ಸು ಮಾಡಿದ್ದರೆ ಒಂದು ಹಣ್ಣಿನ ಅಂಗಡಿಯನ್ನೇ ತೆರೆಯಬಹುದಿತ್ತು. ಯಾಕೆಂದರೆ ಶಾಲೆಗೆ ಈಗ ದಾನಿಗಳಿಂದ ನೆರವು ಹರಿದು ಬರುತ್ತಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಹೆಸರಲ್ಲೇ ಚೆಕ್ ಪಡೆಯುವ ಹಾಜಬ್ಬ, ಎಲ್ಲೂ ಇದರಿಂದ ಹಣ ತೆಗೆಯಲು ಹೋಗುವುದಿಲ್ಲ. ಸಿಕ್ಕಿದ ಹಣ ಖರ್ಚಾದ ಹಣದ ಸರಿಯಾಗಿ ಲೆಕ್ಕವನ್ನಿರಿಸಿಕೊಳ್ಳುವಂತೆ ಶಾಲಾ ಮುಖ್ಯಶಿಕ್ಷಕರಿಗೆ ಹೇಳುತ್ತಲೇ ಇರುತ್ತಾರೆ. ಶಾಲೆಗೆ ಕೊಟ್ಟರೆ ಹಾಜಬ್ಬ ವೈಯಕ್ತಿಕಕ್ಕೆ ಬಳಸುವುದಿಲ್ಲ ಎನ್ನುವುದು ಗೊತ್ತಾದ ನಂತರ ಇಗರ್ಜಿಯವರು ಮನೆಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ. ಹಾಜಬ್ಬರಿಗೆ ಯಾರೂ ಶತ್ರುಗಳಲ್ಲ. ಎಲ್ಲಾ ಪಕ್ಷದವರೂ ಅವರಿಗೆ ಬೇಕು. ಯಾಕೆಂದರೆ ಶಾಲೆ ಅಭಿವೃದ್ಧಿ ಆಗಬೇಕು. ಹಾಗಾಗಿ ಅವರು ರಾಜಕೀಯಕ್ಕೆ ಹೋಗುವವರೇ ಅಲ್ಲ.

ಶಾಲೆಗೆಂದು ಬಂದ ದಾನದಿಂದ ನಯಾಪೈಸೆ ಕೂಡಾ ವೈಯಕ್ತಿಕಕ್ಕೆ ಬಳಸಿಲ್ಲ. ಶಾಲೆ ನೋಡಲು ಹೋಗುವ ನೀವೆಲ್ಲಾದರೂ ಹಾಜಬ್ಬರ ಮನೆಯನ್ನೂ ನೋಡೋಣ ಎಂದು ಹೋದರೆ ಹಾಜಬ್ಬ ಪಕ್ಕದ ಮನೆಗೆ ಓಡುತ್ತಾರೆ. ಯಾಕೆ ಅಂತೀರಾ? ನಿಮಗೆ ಕೂರಲು ಕುರ್ಚಿ ಬೇಕಲ್ವೇ, ಹಾಜಬ್ಬರಿಗೆ ಏನೇನೋ ಪ್ರಶಸ್ತಿಗಳೆಲ್ಲಾ ಬಂದಿರಬಹುದು, ಅದರ ಅಬ್ಬರದಲ್ಲಿ ಹಾಜಬ್ಬ ಕೊಚ್ಚಿಹೋಗುವುದಿಲ್ಲ. ಅವರ ಮನೆಯೂ ಬದಲಾಗುವುದಿಲ್ಲ. ಗಂಡ ಏನೋ ಸಾಧನೆ ಮಾಡಿದ್ದಾರೆ ಎಂದು ಅವರ ಪತ್ನಿ ಮೈಮುನಾ ಸಂಭ್ರಮದಿಂದ ಟಿವಿ ಚಾನೆಲ್ಲುಗಳಿಗೆ ಸಂದರ್ಶನ ಕೊಡುವುದೂ ಇಲ್ಲ. ಅವರ ಮುಖದಲ್ಲೊಂದು ಆಯಾಸದ ನಡುವಿನ ನಸು ಮುಗುಳ್ನಗೆ ಮಾತ್ರ ವ್ಯಕ್ತ. ಒಬ್ಬ ಮಗ, ಇಬ್ಬರು ಪುತ್ರಿಯರು ಹಾಜಬ್ಬರಿಗೆ. ತಾಯಿಗೆ ಆರೋಗ್ಯ ಸರಿ ಇಲ್ಲ ಎಂದು ದೊಡ್ಡ ಮಗಳು ಶಾಲೆ ಬಿಟ್ಟಿದ್ದಾಳೆ. ಇತ್ತೀಚೆಗೆ ಹಾಜಬ್ಬರ ನ್ಯೂಪಡ್ಪು ಶಾಲೆಯ ಹೈಸ್ಕೂಲ್ ಉದ್ಘಾಟನೆಯಾಯಿತು. ಕೆಲ ದಿನಗಳಲ್ಲೇ ತಮಗೆ ನೆರವು ನೀಡಿದವರಿಗೆ ಹೈಸ್ಕೂಲ್ ಖುಷಿಯಲ್ಲಿ ಹಾಜಬ್ಬ ಸಿಹಿ ಹಂಚುತ್ತಾ ಬಂದರು.

ಸಾರ್ ನೀವು ಇದ್ದ ಕಾರಣ ಇದೆಲ್ಲಾ ಆಯ್ತು, ಈ ಅಕ್ಷರ ಬಾರದವನಿಗೆ ನೀವು ಸಹಾಯ ಮಾಡಿದ್ರಲ್ಲ, ನಿಮಗೆ ದೇವರು ಸುಖ, ಶಾಂತಿ ಕೊಡಲಿ…ಎಂದು ಹೇಳುತ್ತಾ ಹೋದರು….ಇಷ್ಟೆಲ್ಲಾ ಗುಣಗಳಿರುವ ವ್ಯಕ್ತಿಯನ್ನು ಕನ್ನಡಪ್ರಭ ಪತ್ರಿಕೆ ತನ್ನ ಮೊದಲ ವರ್ಷದ ವ್ಯಕ್ತಿಯಾಗಿ ಆರಿಸಿತು ೨೦೦೪ರಲ್ಲಿ. ಆ ಬಳಿಕ ಅನೇಕ ಸಮ್ಮಾನಗಳು, ಪ್ರಶಸ್ತಿಗಳು ಹಾಜಬ್ಬರನ್ನು ಅರಸಿ ಬಂದಿವೆ. ಈಗ ಜನ ಹೋದಲ್ಲಿ ಗುರುತಿಸ್ತಾರೆ, ಈ ಬಗ್ಗೆ ಹಾಜಬ್ಬರಿಗೆ ಎಲ್ಲರ ಮೇಲೂ ಕೃತಜ್ಞತಾಭಾವ ಇದೆ, ಅದರಿಂದಲೇ ಅವರಿಗೆ ಬಾಯಿ ಕಟ್ಟುತ್ತದೆ. ಸಾಮಾನ್ಯವಾಗಿ ಸ್ವಲ್ಪ ಪ್ರಚಾರ ಸಿಕ್ಕಿ ತಾವು ಮುಖ್ಯವಾಹಿನಿ ಸೇರಿದ ಕೂಡಲೇ ತಮ್ಮ ಬೆನ್ನ ಹಿಂದೆ ಇದ್ದವರನ್ನು ಮರೆತು ಬಿಡುವ ಸಹಜ ಅಪಾಯ ಇದ್ದದ್ದೇ. ಕಳೆದ ಏಳು ವರ್ಷಗಳ ಹಿಂದೆ ಹೇಗಿದ್ದರೋ ಇಂದಿಗೂ ಹಾಜಬ್ಬ ಹಾಗೆಯೇ ಇದ್ದಾರೆ. ಕಿತ್ತಳೆಯ ಬುಟ್ಟಿ ಅವರ ಕೈಯಲ್ಲಿ ಇನ್ನೂ ಇದೆ, ಅದೇ ಬಿಳಿ ಮುಂಡು, ಬಿಳಿ ಮಡಚಿದ ಕೈಗಳ ಅಂಗಿ, ಕುರುಚಲು ಗಡ್ಡದ ಕೋಲು ಮುಖದಲ್ಲಿ ಕಂಡೂ ಕಾಣದ ನಸುನಗೆ. ಪರಿಚಿತರಿಗೆ ತಲೆಬಾಗಿ ನಮಿಸುವ ಪ್ರಾಮಾಣಿಕ ಭಾವ ಐದು ವರ್ಷಗಳ ಹಾಜಬ್ಬ ಇನ್ನೂ ಬದಲಾಗಿಲ್ಲ ಎನ್ನುವುದಕ್ಕೆ ಸಾಕ್ಷಿ.


-ಇಲ್ಯಾಸ್ ಕಬಕ

Ilyas Kabaka












No comments:

Post a Comment