Thursday, 22 August 2013




ಸಾಲುಗಳು


1.
ಬೇಲಿಯಷ್ಟು
ಬಯಲು ಕೆಣಕಲಿಲ್ಲ
ಮುಚ್ಚಿದ ಬಾಗಿಲಿನಷ್ಟು
ತೆರೆದಿದ್ದು ಸಹ.





2.
ಬೇಲಿ
ಬೇಲಿಯನ್ನ
ಹುಟ್ಟುಹಾಕುತ್ತೆ.







3.
ಹಗಲುದಾರಿಯ ಬಸವನಹುಳು
ರಾತ್ರಿಹೆಜ್ಜೆಗಳ ತುಂಬಿದ ಅಳುಕು.





4.
ತೇವ ಕಾದು
ಬೆಚ್ಚಗೆ ಮೊಳೆಯುವ
ಬಿತ್ತಕ್ಕೆ
ಲೋಕದ ಬಿಸಿ ಕಾಯುವ
ಹೊಣೆ.



Photo: ತೇವ ಕಾದು
ಬೆಚ್ಚಗೆ ಮೊಳೆಯುವ
ಬಿತ್ತಕ್ಕೆ
ಲೋಕದ ಬಿಸಿ ಕಾಯುವ
ಹೊಣೆ.

(ಚಿತ್ರ: ಗೂಗಲ್)




5.
ಪ್ರೇಮ
ನಾಚುತ್ತೆ
ಬಿಡುತ್ತೆ.
ನಾಚಿಸುತ್ತೆ
ಬಿಡಿಸುತ್ತೆ.

Photo: ಮುಕ್ತ ಪ್ರೇಮ

ಪ್ರೇಮ
ನಾಚುತ್ತೆ
ಬಿಡುತ್ತೆ.
ನಾಚಿಸುತ್ತೆ
ಬಿಡಿಸುತ್ತೆ.

(ಆಧಾರ)



6.
ಬಿಂಬದಲ್ಲಿ
ಪ್ರತಿಬಿಂಬ
ಎಲ್ಲಿ
ಅಡಗಿರುವುದೊ...





7.
ಮನೆಯಿಂದ ಸಣ್ಣ ಎದೆನೋವೆಂದು
ರಿಕ್ಷಾ ಹತ್ತಿ ಕುಳಿತವ
ಸ್ಟೆತೋಸ್ಕೋಪು ಹಚ್ಚುವುದರೊಳಗೆ
ತಣ್ಣಗಾದ.
ಎಷ್ಟಪ್ಪ ಇವನ ವಯಸ್ಸು
ಎಂಬ ವೈದ್ಯನ
ಪ್ರಶ್ನೆಯೊಳಗಿನ
ನಿರ್ಲಿಪ್ತಿ
ನಲವತ್ತೊಂಭತ್ತು
ಎಂಬ
ಉತ್ತರದಿಂದ
ಕೊಂಚ
ಅಲ್ಲಾಡಿತು.







8.

ರೋಗ ಗುಣಪಡಿಸುವುದಕ್ಕೆ
ಒಂದಷ್ಟು ಔಷಧಿಗಳು
ಮತ್ತೊಂದಷ್ಟು
ಪಥ್ಯಗಳು
ವಿಧಿಸಿದ
ವರ್ಜ್ಯಗಳೆಲ್ಲ
ಕೊಡಬೇಕಾದ
ಔಷಧಗಳೇ ಆಗಿದ್ದವು
ರೋಗಿ
ಬದುಕಲಿಲ್ಲ.




***


No comments:

Post a Comment