'ಕಾಮಸೂತ್ರ'ದ ಸಾಲುಗಳು
ಗಂಗಾಧರ ಚಿತ್ತಾಲ
ತೆರೆದೆ ಇದೆ ಬಾಗಿಲವು, ನೇರ ಒಳ ಬಾ ಎಂದೆ
ನನ್ನ ಎದೆಕದವನೂ ತೂರಿ ನೀ ಒಳಬಂದೆ
ಏನು ಸುಮಧುರ ಸಹಜವೀ ಪ್ರವೇಶ.
ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಕೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು.
ಆ ಒಂದು ಗಳಿಗೆಯಲಿ ಏನು ಗೈದರು ಮಾಫಿ
ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ
ಸಂದಿಯಲಿ ಮೂಲೆಯಲಿ ಕೈಹಾಕಿ ಬೆದಕಿದರು
ಯಾವ ಗುಟ್ಟನು ಕೆದಕಿದರು ಮಾಫಿ.
ಬರಿಗೈಲೆ ಬಂದು ಪರೆಕಳಚಿ ನಿಂತು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು
ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯು ಕೂಡ ಅಂದುದೆನಿತು.
ಅಂದು ಬೆತ್ತಲೆ ರಾತ್ರಿ
ಒಡಲಿಗೊಡಲನು ಬೆಸೆತು ನಿನ್ನ ಬಳಿ ಸಾರೆ
ಏಕಾಂತಸಮ್ಮತಿಯ ಆ ಒಂದು ಕ್ಷಣದಿಂದೆ
ಈ ಜಗತ್ತೇ ಬೇರೆ.
ಯಾವ ಹಿಗ್ಗಿನ ಸೆಲೆಯೊ ನಮಗೆ ಸಿಲುಕಿ
ಇಳೆಯಮೂಲಕು ನಮ್ಮ ಬೇರು ನಿಲುಕಿ
ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಂದು ಮನುಕುಲದ ತಂದೆತಾಯಿ.
***
No comments:
Post a Comment