ಮಂಡ್ಯ ಮತ್ತು ವಿಥುರಾ: ಲಿಂಗ ಸೂಕ್ಷ್ಮತೆಯ ಎರಡು ಮಾಪಕಗಳು
ಡಾ.ಎಚ್.ಎಸ್ ಅನುಪಮಾ
ಪುರುಷರು ‘ಪತ್ನಿ ಪೀಡಿತ’ರಾಗಿ ತಮ್ಮ ಕಥೆವ್ಯಥೆ ಹೇಳಿಕೊಳ್ಳುತ್ತ ಪುರುಷರ ಹಕ್ಕಿನ ಸಂಘವನ್ನು ಸೃಷ್ಟಿಸಿಕೊಂಡು ಅದರ ಗೌರವಾಧ್ಯಕ್ಷರಾಗಿ ಮಾಜಿ ಮಹಿಳಾ ಮಂತ್ರಿಯನ್ನು ನೇಮಿಸಿಕೊಂಡಿರುವ ಬೆಳವಣಿಗೆಯ ಬೆನ್ನಲ್ಲೇ ಅತ್ಯಾಚಾರ ಪ್ರಕರಣಗಳು ದಿನದಿನಾ ವರದಿಯಾಗುತ್ತಿವೆ. ಕುಸಿಯುತ್ತಿರುವ ಲಿಂಗಾನುಪಾತ, ಜಾತಿ/ಧರ್ಮ/ಕಟ್ಟಳೆ/ಕುಟುಂಬ ಮರ್ಯಾದೆ/ಪ್ರೇಮದ ಹೆಸರಿನಲ್ಲಿ ಹೆಣ್ಣಿನ ಮೇಲೆ ಹೆಚ್ಚುತ್ತಲೇ ಇರುವ ದೌರ್ಜನ್ಯಗಳು, ತಾನೂ ಸರಿಸಮಾನಳೆಂದು ಭಾವಿಸತೊಡಗಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಲೇ ಅಸಮಾನ ವ್ಯವಸ್ಥೆಯನ್ನು ಗ್ರಹಿಸಿ ಸಿಡಿದೇಳುವ ಹೆಣ್ಣು ಮನಸ್ಸು, ಕೌಟುಂಬಿಕ ಜವಾಬ್ದಾರಿಯನ್ನೂ, ಆಸೆಆದರ್ಶಗಳನ್ನೂ ಬಿಟ್ಟುಕೊಡಲಾಗದ ಇಬ್ಬಂದಿತನ - ಇವೆಲ್ಲ ಆಧುನಿಕ ಭಾರತದ ಮಹಿಳೆಯರ ಸಂಕಥನದ ಅವಿನಾ ಭಾಗಗಳಾಗಿವೆ. ಸ್ತ್ರೀವಾದವೆನ್ನುವುದು ಪಾಶ್ಚಾತ್ಯ ಕಲ್ಪನೆಯೆಂದೂ, ಸ್ತ್ರೀವಾದವು ಕೇವಲ ಪುರುಷ ವಿರೋಧದತ್ತ ಗಮನ ನೀಡುವುದೆಂದೂ ತಪ್ಪು ಅಭಿಪ್ರಾಯ ಬಿತ್ತಲಾಗುತ್ತಿದೆ. ಎಚ್ಚೆತ್ತುಕೊಳ್ಳುತ್ತಿರುವ ಮಹಿಳಾ ಸಮೂಹ ತಾರತಮ್ಯ ವಿರೋಧಿಸುತ್ತ ಸಮಾನ ನೆಲೆಯ ಗೌರವ ಬಯಸುವುದನ್ನು ಬೇರೆಬೇರೆ ನೆಲೆಗಳಲ್ಲಿ ಹತ್ತಿಕ್ಕುತ್ತ, ಗುಮಾನಿಯಿಂದ ನೋಡಲಾಗುತ್ತಿದೆ.
ಆಧುನಿಕತೆ ಎಲ್ಲೆಲ್ಲೋ ಪ್ರವೇಶಿಸಿರಬಹುದು. ಆದರೆ ಮಹಿಳೆಯ ಕುರಿತು, ಅವಳ ಅಪೇಕ್ಷಿತ ಗುಣಸ್ವಭಾವ, ಜವಾಬ್ದಾರಿಗಳ ಕುರಿತ ಗ್ರಹಿಕೆಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಒಂದೆಡೆ ಸಮಾನ ಅವಕಾಶ ಎನ್ನುವ ಆಧುನಿಕ ಸಮಾಜ ವ್ಯವಸ್ಥೆ, ಮತ್ತೊಂದೆಡೆ ಹೆಣ್ತನದ ಜವಾಬ್ದಾರಿ ಹೇರುವ ಕೌಟುಂಬಿಕ ವ್ಯವಸ್ಥೆ - ಈ ಎರಡರ ನಡುವಿನ ವೈರುಧ್ಯ ಲಿಂಗತಾರತಮ್ಯ ಮತ್ತು ಅಸೂಕ್ಷ್ಮತೆಯನ್ನು ಬಲಪಡಿಸುತ್ತಲೇ ಇದೆ. ನ್ಯಾಯ, ರಕ್ಷಣೆ, ಮಾಧ್ಯಮ, ಆಡಳಿತ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯನ್ನು ಬಲಗುಂದಿಸಲು ಅವಳ ಕೌಟುಂಬಿಕ, ವೈಯಕ್ತಿಕ ವಿವರಗಳನ್ನು ಎಳೆದು ತರುವುದು ಈ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಒಟ್ಟಾರೆಯಾಗಿ ನಾಗರಿಕ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಆಧುನಿಕತೆಯಷ್ಟು ಆಳವಾಗಿ ಇಳಿದಿಲ್ಲ ಎಂದು ತಿಳಿದುಬರುತ್ತದೆ.
ಹೀಗಿರುವಾಗ ಸಮಾಜದ ಮಹಿಳಾ ಸಂವೇದನೆ ಎಂಥದೆಂದು ತಿಳಿಯಲು ಇತ್ತೀಚಿನ ಎರಡು ಪ್ರಕರಣಗಳನ್ನು ಉಲ್ಲೇಖಿಸಬಹುದು.
ಹೆಣ್ಣುಮಕ್ಕಳೇ, ಹುಶಾರ್! ರಾಜಕೀಯ ನಿಮಗಲ್ಲ!!
ಮಹಿಳಾ ಪ್ರತಿನಿಧಿಗಳ ಸಂಖ್ಯೆ, ಅವರಿಗೆ ಕೊಡಲಾಗುವ ಪ್ರಾಮುಖ್ಯತೆ-ಜವಾಬ್ದಾರಿ, ಮಹಿಳಾ ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಒದಗುವ ತೊಂದರೆ ಇವನ್ನೆಲ್ಲ ಗಮನಿಸಿದರೆ ರಾಜಕೀಯ ಕ್ಷೇತ್ರವು ‘ಮಹಿಳೆಯರೇ, ಇದು ನೀವು ಕಾಲಿಡುವ ಜಾಗವಲ್ಲ’ ಎಂದು ಭಯಾನಕ ವಾತಾವರಣ ಸೃಷ್ಟಿಸಿ ಹೇಳುತ್ತಲಿರುವಂತಿದೆ. ಮಹಿಳೆಯ ಘನತೆಗೆ ಕುಂದು ಬರುವಂಥ ಎಂಥ ನಡೆನುಡಿಯೂ ಮಹಿಳಾ ಮತಗಳನ್ನು ಕಿತ್ತುಕೊಳ್ಳಲಾರದು ಎಂದು ರಾಜಕಾರಣಿಗಳು ಧೈರ್ಯವಾಗಿದ್ದಾರೆ. ಹೆಂಡತಿಯನ್ನು ಕೊಂದರೇನು? ಒಬ್ಬಳಿರುವಾಗಲೇ ಮತ್ತೊಬ್ಬಳನ್ನು ಕಾನೂನು ಬಾಹಿರವಾಗಿ ಮದುವೆಯಾದರೇನು? ಹೆಂಡತಿಯನ್ನು ಮನೆಯಿಂದ ಹೊರಬರದಂತೆ ಗೃಹಬಂದಿಯಾಗಿಟ್ಟರೇನು? ಅವೆಲ್ಲ ಪುರುಷ ರಾಜಕಾರಣದ ಮಹಾತ್ವಾಕಾಂಕ್ಷೆಗೆ ಎಂದೂ ಅಡ್ಡ ಬರುವುದಿಲ್ಲ. ಬದಲಾಗಿ ಆಳುವವ ಮೊದಲು ಹೆಣ್ಣನ್ನು ಆಳಬೇಕೆಂದೂ, ಅಂಥದನ್ನೆಲ್ಲ ‘ಅರಗಿಸಿಕೊಂಡಿರುವುದು’ ಪುರುಷತ್ವದ ಸಂಕೇತವೆಂದೂ ಭಾವಿಸಲಾಗುತ್ತದೆ. ರಾಜಕಾರಣಿಗಳು ಮಹಿಳೆಯನ್ನು ನಾನಾ ರೀತಿಗಳಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಹತ್ತು ಹಲವು ಹಗರಣ, ವರದಿಗಳಲ್ಲಿ ನೋಡುತ್ತ ಬಂದಿದ್ದೇವೆ. ಮಾನಸಿಕ, ದೈಹಿಕ ದೌರ್ಜನ್ಯವಷ್ಟೆ ಅಲ್ಲ, ಚುನಾವಣೆಗೆ ನಿಂತಾಗಲಿಂದ ತೇಜೋವಧೆ ಮಾಡುವ ಪ್ರಯತ್ನಗಳು ಹೇಗೆ ನಡೆಯುತ್ತವೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆ ಸಾಕ್ಷಿಯಾಗಿದೆ.
ಮಹಿಳಾ ಸಮಾನತೆ ಕುರಿತು ಉದ್ದುದ್ದ ಮಾತನಾಡುವ ಪಕ್ಷಗಳು ಕೂಡಾ ಮಹಿಳಾ ಅಭ್ಯರ್ಥಿಗಳನ್ನು ಗ್ಲಾಮರ್‌ಗೆಂದು, ಮೀಸಲು ಕ್ಷೇತ್ರವೆಂಬ ಅನಿವಾರ್ಯತೆಗೆಂದು, ಜಾತಿಬಲವೆಂದು ಅಥವಾ ಕೌಟುಂಬಿಕ ಹಿನ್ನೆಲೆಯಿದೆಯೆಂದು ಬಳಸಿಕೊಳ್ಳುತ್ತವೆಯೇ ಹೊರತು ಅಧಿಕಾರ ಹಂಚಿಕೊಳ್ಳುವ ಆಶಯದಿಂದ ಕಣಕ್ಕಿಳಿಸುವುದಿಲ್ಲ. ಮಂಡ್ಯ ಉಪಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಹಣಾಹಣಿ ವೈಯಕ್ತಿಕತೆಯ ಗಡಿ ದಾಟಿ ಹಲವು ಕಾರಣಗಳಿಗೆ ಸುದ್ದಿಯಾಯಿತು. ಪಳಗಿದ ರಾಜಕೀಯ ನೇತಾರರು ಗೆಲುವಿಗಾಗಿ ತಮ್ಮ ಬತ್ತಳಿಕೆಯ ಒಂದೊಂದೇ ದುಷ್ಟ ಅಸ್ತ್ರಗಳ ಪ್ರಯೋಗದಲ್ಲಿ ನಿರತರಾದರು.
ಚುನಾವಣೆ ಎಂಬ ಮಾಯಾ ಬಜಾರಿನಲ್ಲಿ ಹರಾಜಿಗಿಡುವ ವಿಷಯಗಳು ಒಂದೆರೆಡಲ್ಲ. ರಾಜಕಾರಣದಲ್ಲಿ ಲಿಂಗ ಅಸೂಕ್ಷ್ಮತೆ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎನ್ನುವುದಕ್ಕೆ ರಮ್ಯಾರನ್ನು ರಾಜಕೀಯ ನಾಯಕರು ನಡೆಸಿಕೊಂಡ ರೀತಿ ಉದಾಹರಣೆಯಾಗಿದೆ. ರಮ್ಯಾರನ್ನು ‘ಟೆಸ್ಟ್‌ಟ್ಯೂಬ್ ಬೇಬಿ’ ಎಂದು ಕರೆಯಲಾಯಿತು. ನಂತರ ರಮ್ಯಾ ತಮ್ಮ ತಂದೆಯ ಜೊತೆ ಇಲ್ಲವೆಂಬ ಸುದ್ದಿ ಸಂಗ್ರಹಿಸಿ ಅವರ ತಂದೆ ಯಾರಿರಬಹುದೆಂಬ ಊಹೆ ಶುರುವಾಯಿತು. ಅವರ ತಾಯ್ತಂದೆಯರ ಜಾತಿಯ ಬಗ್ಗೆ ಚರ್ಚೆ ಶುರುವಾಯಿತು. ಆಕೆಯ ಮೂಲ ಕೆದಕಿ ಅವರ ಜಾತಿ ಯಾವುದು ಎಂದು ಬಹಿರಂಗಪಡಿಸಿ ಆ ಮೂಲಕ ಬಹುಸಂಖ್ಯಾತ ಒಕ್ಕಲಿಗ ಮತದಾರರ ಓಟು ಒಡೆಯುವ ಪ್ರಯತ್ನ ನಡೆಯಿತು. ಹೀಗೆ ಜಾತಿಮತಗಳ ಲೆಕ್ಕಾಚಾರದ ರಾಜಕಾರಣದಲ್ಲಿ ರಮ್ಯಾ ತಮ್ಮ ಕುಟುಂಬದ ಗುಟ್ಟುಗಳನ್ನು ಬಯಲಾಗಿಸಬೇಕಾಯಿತು. ಇದು ಮಹಿಳಾ ಘನತೆಯನ್ನು ರಾಜಕಾರಣವು ಹೇಗೆ ಪರಿಭಾವಿಸುತ್ತದೆ ಎಂದೂ ತಿಳಿಸಿತು.
ಪ್ರತಿಯೊಂದು ಜೀವಿಗೂ ತಾಯಿ ಮಾತ್ರ ವಾಸ್ತವ. ತಂದೆ ಊಹೆ. ರಮ್ಯಾ ಟೆಸ್ಟ್‌ಟ್ಯೂಬ್ ಬೇಬಿ ಹೌದೋ ಅಲ್ಲವೋ ಗೊತ್ತಿಲ್ಲ. ಆಕೆಯ ತಂದೆ ಕುರಿತು ಹೇಳಬಲ್ಲವರು ಅವರ ತಾಯಿ. ರಮ್ಯಾ ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳುತ್ತಿಲ್ಲ. ಆಕೆ ಬಯಸಿರುವುದು ಜನ ಪ್ರತಿನಿಧಿಯಾಗಲು. ಅದಕ್ಕೆ ಯಾರು ಆಕೆಯ ತಂದೆ ಎನ್ನುವುದು ಮುಖ್ಯವಲ್ಲ. ಚುನಾವಣೆಯಲ್ಲಿ ನಿಲ್ಲಲು ಭಾರತೀಯ ಪೌರನಾಗಿರಬೇಕು, ೨೧ ವರ್ಷ ವಯಸ್ಸಾಗಿರಬೇಕು ಎಂಬಿತ್ಯಾದಿ ಅರ್ಹತೆಗಳಿವೆಯೇ ಹೊರತು ಅವರ ಅಪ್ಪ ಅಮ್ಮ ಯಾರೆನ್ನುವುದು, ನೈಸರ್ಗಿಕವಾಗಿ ಫಲಿತಗೊಂಡ ಅಂಡಾಣುವಿನಿಂದ ಹುಟ್ಟಿದವರಷ್ಟೇ ಚುನಾವಣೆಗೆ ಸ್ಪರ್ಧಿಸಬೇಕೆನ್ನುವುದು ಅರ್ಹತೆಯ ಪಟ್ಟಿಯಲ್ಲಿ ಇಲ್ಲ.
ಕ್ಷಣದ ಮಟ್ಟಿಗೆ ಇಂಥ ಸುದ್ದಿಗಳು ಜನಸಾಮಾನ್ಯರಿಗೆ ರೋಚಕವೆನಿಸಬಹುದೇ ಹೊರತು ಗೆಲುವು ಸೋಲಿಗೆ ಇದು ಮುಖ್ಯವಲ್ಲ. ರಮ್ಯಾ ಈಗ ಗೆದ್ದಿದ್ದಾರೆ. ಆದರೆ ಈ ಪ್ರಶ್ನೆಗಳೆಲ್ಲ ಚುನಾವಣಾ ರಾಜಕೀಯಕ್ಕೆ ಮುಖ್ಯವಾಗುತ್ತದೆ. ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಪೈಪೋಟಿ ನಡೆಸುತ್ತ ‘ರಮ್ಯಾ ಹುಟ್ಟಿನ ಮೂಲ ಏನು?’ ಎಂಬ ಚರ್ಚೆ ನಡೆಸುವ ಮಾಧ್ಯಮಗಳಿಗೆ ಮುಖ್ಯವಾಗುತ್ತದೆ.
ರಮ್ಯಾ ಆಯ್ಕೆಯಾಗಿದ್ದಾರೆ. ಆದರೆ ತಾನು ಗೆದ್ದರೆ ಮಂಡ್ಯದಲ್ಲಿ ಉಳಿಯುವುದಾಗಿ ಹೇಳಿದ್ದ ಅವರು ತಮ್ಮ ರಾಜಕೀಯ ಪ್ರವೇಶದ ಉದ್ದೇಶ, ಬದ್ಧತೆ ಎಂಥದೆಂದು ಜಾಹೀರು ಮಾಡಿದ್ದಾರೆ. ಗೆದ್ದರಷ್ಟೆ ಮಂಡ್ಯದಲ್ಲಿದ್ದು ಜನಸೇವೆ ಮಾಡುವುದಾದರೆ ಅವರ ಸೋಲುಗೆಲುವು ಗಮನಿಸದೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದ ಜನತೆಗೆ ಪ್ರತಿಯಾಗಿ ಅವರು ಏನು ಕೊಟ್ಟಂತಾಯಿತು? ವೃತ್ತಿಪರ ರಾಜಕಾರಣಿಗಳು ಬಾಯಿ ಮಾತಿಗಾದರೂ ಸೋತರೂ ಕ್ಷೇತ್ರದ ಜನರ ಸೇವೆ ಮಾಡುತ್ತೇನೆಂದು, ಸೋತ ಬಳಿಕವೂ ಜನರ ತೀರ್ಪು ಗೌರವಿಸುತ್ತೇನೆಂದು ಹೇಳುತ್ತಾರೆ. ಆದರೆ ರಮ್ಯಾ ತಾನೆಂಥ ಎಳಸು ರಾಜಕಾರಣಿ ಎಂದು ತಮ್ಮ ಹೇಳಿಕೆಯಿಂದ ಸಾಬೀತುಪಡಿಸಿದ್ದಾರೆ. ತಾನು ಮಂಡ್ಯದಲ್ಲಿ ವಾಸಿಸುವುದು ಅಲ್ಲಿನ ಜನರ ಸೌಭಾಗ್ಯವೆಂದು ರಮ್ಯ ತಿಳಿದಂತಿದೆ. ಹೀಗೆ ಟೈಂಪಾಸ್ ರಾಜಕಾರಣ ಮಾಡುವವರನ್ನು, ಗೆಲ್ಲಿಸಿದರಷ್ಟೇ ‘ನಾನಿರುವುದೇ ನಿಮಗಾಗಿ’ ಎನ್ನುವ ಜನಪ್ರಿಯ ನಾಯಕರನ್ನು ಜನಪ್ರಿಯತೆ ಹೆಚ್ಚು ಕಾಲ ಪೊರೆಯುವುದಿಲ್ಲ. ಅಮಿತಾಭರಿಂದ ಹಿಡಿದು ವಿಫಲ ರಾಜಕಾರಣಿಗಳಾದ ಹಲವು ನಟರ ಉದಾಹರಣೆ ನಮ್ಮ ಮುಂದಿದೆ. ರಮ್ಯಾ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಮ್ಮ ಗೆಲುವನ್ನು ಜೀರ್ಣಿಸಿಕೊಳ್ಳಬೇಕು. ಕ್ಷೇತ್ರದ ಜನತೆ ಇಟ್ಟ ವಿಶ್ವಾಸವನ್ನು ನಿಜವಾಗಿಸಬೇಕು.
ಜೊತೆಗೆ ತರುಣಿಯಾಗಿರುವ ಆಕೆ ಮಹಿಳೆಯ ಘನತೆಗೆ ಕುಂದು ಬರುವಂಥ ನಡೆ ನುಡಿಗಳು ಮಹಿಳಾ ಮತಗಳನ್ನು ಕಿತ್ತುಕೊಳ್ಳಬಹುದು ಎಂಬ ಅಧೈರ್ಯವನ್ನು ರಾಜಕಾರಣದ ಸಹವರ್ತಿಗಳಲ್ಲಿ ಮೂಡಿಸಬೇಕು. ಅಷ್ಟಾದಲ್ಲಿ ಅದು ದೊಡ್ಡ ಸಾಧನೆಯಾಗಲಿದೆ.
‘ನನ್ನಷ್ಟಕ್ಕೆ ನನ್ನನ್ನು ಇರಲು ಬಿಡಿ..’
ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಬರುವ ವರದಿಗಳನ್ನು ಗಮನಿಸಿ, ‘ಲೇಡೀಸ್ ಫಿಂಗರ್’ ಎಂಬ ಬ್ಲಾಗಿನಲ್ಲಿ ತಿಲೋತ್ತಮಾ ಶ್ರೀನಿವಾಸ್ ಎನ್ನುವವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಗಮನಿಸುವಂತೆ ವೃತ್ತಪತ್ರಿಕೆಗಳಲ್ಲಿ ‘ಇಬ್ಬರು ಯುವತಿಯರ ಮೇಲೆ ಗುಂಪು ಅತ್ಯಾಚಾರ; ಐವರ ಬಂಧನ’; ‘ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಐವರಿಂದ ಅತ್ಯಾಚಾರ’; ‘ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಮನೆಗೆಲಸದವನ ಬಂಧನ’ ಎಂದೆಲ್ಲ ವರದಿಗಳು ಬರುತ್ತವೆ. ಎಲ್ಲ ವರದಿಗಳಲ್ಲಿ ಹೆಚ್ಚುಕಡಿಮೆ ಅತ್ಯಾಚಾರಕ್ಕೊಳಗಾದ ಯುವತಿ ಹಾಗೂ ಆ ಕ್ರಿಯೆ ಮೊದಲ ಪ್ರಾಶಸ್ತ್ಯ ಪಡೆಯುತ್ತವೆ. ನಂತರವಷ್ಟೆ ‘ಯಾರ ಬಂಧನ’ ಎನ್ನುವ ಮಾಹಿತಿಯಿರುತ್ತದೆ. ವರದಿಯಲ್ಲಿ ಜೊತೆಜೊತೆಗೆ ಅವಳು ‘ಒಬ್ಬಂಟಿಯಾಗಿದ್ದಳು/ಪಬ್‌ನಿಂದ ಹಿಂತಿರುಗುತ್ತಿದ್ದಳು/ಕೆರಳಿಸುವ ಉಡುಪಿನಲ್ಲಿದ್ದಳು/ಅರ್ಧರಾತ್ರಿಯಲ್ ಲಿ ಲೈಬ್ರರಿಯಿಂದ ಒಂಟಿಯಾಗಿ ಹೋಗುತ್ತಿದ್ದಳು/ಗೆಳೆಯನ ಜೊತೆಗಿದ್ದಳು’ ಎನ್ನುವಂತಹ ಅಪರಾಧಕ್ಕೆ ಅವಶ್ಯವಿಲ್ಲದ ಸಂಗತಿಗಳನ್ನೂ ಸೇರಿಸಿ ಅತ್ಯಾಚಾರಕ್ಕೊಳಪಟ್ಟಿದ್ದರಲ್ಲಿ ಅವಳ ಪಾತ್ರವೂ ಇದ್ದೀತು ಎಂಬ ಭಾವನೆ ಸುಳಿಯುವಂತೆ ಮಾಡಲಾಗುತ್ತದೆ. ದಿನದಿನಾ ನ್ಯೂಸ್ ಪೇಪರುಗಳ ಅತ್ಯಾಚಾರ ವರದಿಯಲ್ಲಿ ‘ಪ್ಯಾಸಿವ್ ವಾಯ್ಸ್’ ಬಳಸುವುದನ್ನು ಅವರ ಅವಲೋಕನ ಗಮನಿಸುತ್ತದೆ.
ಇತ್ತೀಚೆಗೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಮಾತನಾಡುತ್ತ ಒಬ್ಬರು, ‘ಎಂಜಿ ರೋಡಿನಲ್ಲಿ ಓಡಾಡುವ ಹುಡುಗಿಯರ ವೇಷಭೂಷಣಗಳನ್ನು ನೋಡಿದರೆ ಈಗ ಅತ್ಯಾಚಾರವಾಗುತ್ತಿರುವವರ ಸಂಖ್ಯೆ ತುಂಬ ಕಮ್ಮಿ’ ಎಂದು ಪ್ರತಿಕ್ರಿಯಿಸಿದರು! ಈ ಲೋಕದ ಹೆಣ್ಣುಗಳೆಲ್ಲ ಎಂಜಿ ರೋಡಿನಲ್ಲೇ ಇರುವರೆಂದು ಅವರು ಭಾವಿಸಿದಂತಿದೆ. ಒಬ್ಬ ರೇಪಿಸ್ಟ್ ಸಾಧು, ‘ಅತ್ಯಾಚಾರಿಗಳ ಕಾಲಿಗೆ ಬಿದ್ದು ಅವರನ್ನು ಅಣ್ಣಾ ಎಂದಿದ್ದರೆ ಬಿಟ್ಟುಬಿಡುತ್ತಿದ್ದರು’ ಎಂದು ಹೇಳಿದರು. ‘ಈಗ ನಡೆಯುತ್ತಿರುವ ಕೊಲೆ, ಆತ್ಮಹತ್ಯೆ, ಟ್ರಾಫಿಕ್ ಆಕ್ಸಿಡೆಂಟ್ ಸಾವುಗಳಿಗೆ ಹೋಲಿಸಿದರೆ ರೇಪ್ ಎಂಬ ಕ್ರೈಂನ ಅಂಕಿಅಂಶ ತುಂಬ ಕಮ್ಮಿಯಿದೆ, ಮಹಿಳಾ ಸಂಘಟನೆಗಳು ಸುಮ್ಮನೆ ಬೊಬ್ಬೆ ಹಾಕುತ್ತವೆ’ ಎಂದವರು ಮಗದೊಬ್ಬರು. ಟಿವಿ ಟಾಕ್‌ಷೋ ಒಂದರಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ ಹೆಸರಾಂತ ವ್ಯಕ್ತಿಯೊಬ್ಬರು ‘ಹಾಗೇನಾದರೂ ಆದಲ್ಲಿ ನಾವು ಬಳೆತೊಟ್ಟು ಕೂರುವುದಿಲ್ಲ’ ಎಂದರು. ರೇಪ್ ಕೇಸುಗಳ ಬಗ್ಗೆ ಪ್ರತಿಕ್ರಿಯಿಸುತ್ತ ಮಗದೊಬ್ಬರು, ‘ಈಗ ಹುಡುಗರಿಗೆ ಪರಿಶುದ್ಧ ಕನ್ಯೆಯರು ಸಿಗುವುದೇ ಕಷ್ಟ. ಹಾಗೆ ನೋಡಿದರೆ ಬಾಲ್ಯವಿವಾಹ ಒಂದು ಉತ್ತಮ ಪದ್ಧತಿಯಾಗಿತ್ತು’ ಎಂದರು. ಹೆಣ್ಣಿನ ವ್ಯಕ್ತಿತ್ವ ನಾಶ ಮಾಡಿ ಅವಳದಲ್ಲದ ತಪ್ಪಿಗೆ ಜೀವಮಾನವಿಡೀ ನರಳುವಂತೆ ಮಾಡುವ ಈ ಅಪರಾಧದ ಬಗೆಗೆ ಸಮಾಜದ ಪ್ರತಿಕ್ರಿಯೆಗಳು ದಿಗ್ಭ್ರಮೆ ಮೂಡಿಸುವಾಗಲೇ ಅಮ್ಮನ ಎದೆಹಾಲು ಕುಡಿದು ಬೆಳೆದದ್ದು ಎಲ್ಲರಿಗೂ ಮರೆತುಹೋಯಿತೇ ಎಂಬ ಅನುಮಾನ ಕಾಡತೊಡಗುತ್ತದೆ.
ಈ ನಡುವೆ ಕೇರಳದ ವಿಥುರಾ ಕೇಸು ಮತ್ತೆ ಮುನ್ನೆಲೆಗೆ ಬಂದಿದೆ. ತಿರುವನಂತಪುರದಿಂದ ೩೬ ಕಿಮೀ ದೂರದಲ್ಲಿರುವ ಊರು ವಿಥುರಾ. ೧೯೯೫ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕೆಲಸ ಕೊಡಿಸುವುದಾಗಿ ಒಬ್ಬ ಕರೆದೊಯ್ದು ದೇಹ ಮಾರಾಟ ಜಾಲದಲ್ಲಿ ತೊಡಗಿಸಿದ. ೧೯೯೫ ನವೆಂಬರ್‌ನಿಂದ ೧೯೯೬ ಮೇ ತನಕ ಅನೇಕ ಸ್ಥಳಗಳಲ್ಲಿ, ಅನೇಕ ಜನ ಅವಳ ಮೇಲೆ ಅತ್ಯಾಚಾರ ಎಸಗಿದರು. ನಂತರ ಅವಳನ್ನು ಪಾರು ಮಾಡಲಾಯಿತು. ಈ ಕೇಸಿನಲ್ಲಿ ಜಗತಿ ಶ್ರೀಕುಮಾರ್ ಎಂಬ ಮಲಯಾಳಂ ನಟನೂ ಸೇರಿದಂತೆ ಸರ್ಕಾರಿ ಅಧಿಕಾರಿ ಹಾಗೂ ಬಿಸಿನೆಸ್ ಸಾಮ್ರಾಜ್ಯದ ಗಣ್ಯರಿರುವುದು ಪತ್ತೆಯಾಯಿತು. ಮಲಯಾಳಂ ಹಾಸ್ಯನಟ ಶೀಘ್ರ ಬಿಡುಗಡೆಯಾದರೂ ಉಳಿದ ೩೫ ಆರೋಪಿಗಳ ವಿಚಾರಣೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಆರೋಪಿಗಳು ಒಬ್ಬರಾದ ಮೇಲೊಬ್ಬರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತ ೧೮ ವರ್ಷ ಕಳೆಯಿತು. ಆಕೆ ೨೦೧೧ರಲ್ಲಿ ಎಲ್ಲ ಕೇಸುಗಳನ್ನೂ ಒಂದೇ ಆಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಕೇರಳ ಹೈಕೋರ್ಟಿಗೆ ಮನವಿ ಮಾಡಿದ್ದಳು. ಕೋರ್ಟು ಅದು ಸಾಧ್ಯವಿಲ್ಲವೆಂದು ಹೇಳಿತು. ಅವಳ ಸಮೀಪವರ್ತಿಗಳು ತಿಳಿಸಿರುವಂತೆ ಸರ್ಕಾರದಿಂದ ಆಕೆಗೆ ಯಾವ ಧನಸಹಾಯವೂ ದೊರೆಯಲಿಲ್ಲ. ಕೆಲಸಕ್ಕೆ ಹೋಗಲು ಪ್ರಯತ್ನಿಸಿದಾಗ ಹಳೆಯ ನೆರಳುಗಳು ಮತ್ತೆ ಹಿಂಬಾಲಿಸಿದಾಗ ಹೆದರಿದ ಆಕೆ ಈಗ ಮನೆಯಲ್ಲೇ ಇದ್ದಾಳೆ. ಕೋರ್ಟು, ಕಚೇರಿ ಎಲ್ಲದರಿಂದ ತಪ್ಪಿಸಿಕೊಂಡು ಇದ್ದಾಳೆ.
ಜಗತಿ ಶ್ರೀಕುಮಾರ್ ಖುಲಾಸೆಯಾದುದರ ವಿರುದ್ಧ ಪ್ರಾಸಿಕ್ಯೂಷನ್ ಮೇಲ್ಮನವಿ ಸಲ್ಲಿಸಲಿಲ್ಲ. ಆತ ಖುಲಾಸೆಗೊಂಡ ಮೇಲೆ ಇನ್ನೂ ೨೨ ಕೇಸುಗಳು ಬಾಕಿಯಿವೆ. ಈಗ ವಿಶೇಷ ನ್ಯಾಯಾಲಯಕ್ಕೆ ೨೨ರಲ್ಲಿ ೧೫ ಕೇಸುಗಳನ್ನು ವರ್ಗಾಯಿಸಲಾಗಿದೆ. ಆಗಸ್ಟ್ ೧೨ರಿಂದ ಅಕ್ಟೋಬರ್ ಒಂದರವರೆಗೆ ಅತ್ಯಾಚಾರಕ್ಕೊಳಗಾದ ಆಕೆಯಿಂದ ಮೊದಲು ಹೇಳಿಕೆ ಪಡೆಯುವುದೆಂದು, ನಂತರ ಆರೋಪಿಗಳನ್ನು ವಿಚಾರಣೆಗೊಳಪಡಿಸುವುದೆಂದು ನಿಗದಿಗೊಳಿಸಲಾಗಿತ್ತು. ಆಗಸ್ಟ್ ೧೯ರಂದು ಆಕೆ ವಿಶೇಷ ನ್ಯಾಯಾಲಯದೆದುರು ಹಾಜರಾಗಲು ವಿಫಲಳಾದಾಗ ನ್ಯಾಯಾಧೀಶರು, ‘ಕೋರ್ಟಿನೆದುರು ಹಾಜರಾಗುವುದನ್ನು ಪದೇಪದೇ ತಪ್ಪಿಸುವುದರಿಂದ ವಿಶೇಷ ನ್ಯಾಯಾಲಯದ ಕೆಲಸಗಳು ಆಗಲೇ ಎರಡು ತಿಂಗಳು ವಿಳಂಬವಾಗಿದೆ. ಎಲ್ಲವನ್ನೂ ಒಮ್ಮೆಲೇ ವಿಚಾರಣೆ ಮಾಡಲು ಸಾಧ್ಯವಿಲ್ಲ. ಕಾನೂನಿನ ಎದುರು ಎಲ್ಲರೂ ಸಮಾನರು. ಬರಲು ಆಕೆಗೆ ವಿಶೇಷ ಪೊಲೀಸ್ ರಕ್ಷಣೆ ಬೇಕಾದರೆ ಕೊಡಬಹುದು, ಷೆಡ್ಯೂಲಿನ ಅವಧಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿತಗೊಳಿಸಬಹುದು. ಆದರೆ ಆಕೆ ಸೆ.೨ರಂದು ಕೋರ್ಟಿನೆದುರು ಬರಲೇಬೇಕು. ಬರಲು ಆಕೆಗೆ ಏನು ಕಷ್ಟವಿದೆ? ಇಂಥ ನಡವಳಿಕೆಗಳು ನ್ಯಾಯವ್ಯವಸ್ಥೆಯನ್ನು ಅಪಹಾಸ್ಯ ಮಾಡಿದಂತೆ, ನೆಗ್ಲಿಜೆನ್ಸ್ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಗುಡುಗಿದ್ದಾರೆ.
ಆಕೆಯೀಗ ಹೇಳುತ್ತಿದ್ದಾಳೆ, ‘ನನಗೇನೂ ಬೇಡ. ನನ್ನಷ್ಟಕ್ಕೆ ನನ್ನನ್ನು ಇರಲು ಬಿಡಿ.’
ನ್ಯಾಯ ಸಿಗಬೇಕೆನ್ನುವವರು ನ್ಯಾಯಾಲಯದೆದುರು ಹಾಜರಾಗಲೇಬೇಕು. ಸರಿ. ಆದರೆ ಈಗ ಅವಳ ಪರಿಸ್ಥಿತಿಯನ್ನರಿತು ಮದುವೆಯಾದವನೊಡನೆ ಸಂಸಾರ ನಡೆಸುತ್ತಿರುವ ಆಕೆ ೧೧ ತಿಂಗಳ ಮಗುವಿನ ತಾಯಿಯಾಗಿ ೨೨ ಕೇಸುಗಳಿಗಾಗಿ ಎಷ್ಟು ಸಾರಿ ಕೋರ್ಟಿನೆದುರು ಹಾಜರಾಗಬೇಕು? ನ್ಯಾಯ ಕೇಳಲು ಹೋದರೆ ವಿಳಂಬ ಮತ್ತಿತರ ಅಡಚಣೆಗಳು ಒಂದೆಡೆಯಾದರೆ, ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತ ಮುಜುಗರಕ್ಕೊಳಗಾಗುವ ಹಿಂಸೆ ಇನ್ನೊಂದು ಕಡೆ. ಆಕೆ ಪದೇಪದೇ ಕೋರ್ಟಿಗೆ ಅಲೆಯುತ್ತ, ೧೮ ವರ್ಷ ಕೆಳಗೆ ತಾನು ಅಪ್ರಾಪ್ತಳಾಗಿರುವಾಗ ಸತತ ಆರು ತಿಂಗಳು ನಡೆದ ದೌರ್ಜನ್ಯವನ್ನು ನೆನಪಿಸಿಕೊಳ್ಳುತ್ತ ಇನ್ನೆಷ್ಟು ಕಾಲ ಅತ್ಯಾಚಾರದ ನೆನಪಿನಲ್ಲಿ, ನೆರಳಿನಲ್ಲಿ ಬದುಕಬೇಕು? ಈಗ ಯೋಚಿಸುವ. ಆಕೆ ನಮ್ಮ ಮಗಳೋ, ತಂಗಿಯೋ ಆಗಿದ್ದರೆ ನಾವು ಏನು ಹೇಳುತ್ತಿದ್ದೆವು?
ನ್ಯಾಯಾಧೀಶರು ಅಸೂಕ್ಷ್ಮವಾಗಿದ್ದಷ್ಟು ನ್ಯಾಯದಾನವೂ ಲಿಂಗ ತಾರತಮ್ಯ ಪೀಡಿತವಾಗಿರುತ್ತದೆ. ಒಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ‘ಹೆರಿಗೆ ನೋವು ಭೂಮಿ ಮೇಲೆ ಅತ್ಯಂತ ತೀವ್ರತರವಾದ ನೋವು ಎನ್ನುತ್ತಾರೆ. ಆ ನೋವನ್ನೇ ಸಹಿಸಿಕೊಂಡು ಮಕ್ಕಳನ್ನು ಹೆತ್ತಿರುವೆ, ಗಂಡ ಹೊಡೆವ ನೋವಿಗೆ ವಿಚ್ಛೇದನ ಕೇಳುತ್ತೀಯಲ್ಲ’ ಎಂದರಂತೆ. ಹೆರಿಗೆ ನೋವು, ಗಂಡ ಹೊಡೆವ ನೋವು ಎರಡೂ ಹೋಲಿಸಲ್ಪಡುವ ಮಾನಗಳೇ? ಉದ್ದೇಶಪೂರ್ವಕವಾಗಿ ಹಿಂಸೆ ಕೊಡಲೆಂದೇ ಹೊಡೆದ ನೋವನ್ನು ಸಂತತಿ ಮುಂದುವರಿಕೆಗಾಗಿ ಹೆಣ್ಣು ಸಹಿಸಲೇಬೇಕಾಗಿರುವ ಹೆರಿಗೆ ನೋವೆಂಬ ನೈಸರ್ಗಿಕ ನೋವಿನೊಡನೆ ಹೋಲಿಸಲಾದೀತೇ? ಆ ನೋವನ್ನೇ ತಡೆದುಕೊಂಡ ಮೇಲೆ ಉಳಿದೆಲ್ಲ ನೋವೂ ಅವಳಿಗೆ ಸಹ್ಯ, ಗೌಣ ಎಂದರ್ಥವೇ?
ನ್ಯಾಯಾಧೀಶರು ಹೀಗೆಂದ ಮೇಲೆ ಸ್ವತಂತ್ರ ಭಾರತದ ಹೆಣ್ಣುಮಕ್ಕಳು ತಮ್ಮ ಮಾನ, ನ್ಯಾಯ ಪಡೆಯಲು ಕೋರ್ಟನ್ನು ನೆಚ್ಚಬಹುದೆ? ಕಾಲಮಿತಿಯೊಳಗೆ ಕೇಸು ಇತ್ಯರ್ಥವಾಗದ ಹೊರತು ನ್ಯಾಯವ್ಯವಸ್ಥೆ ನ್ಯಾಯದಾನ ಮಾಡಲು ಸಾಧ್ಯವೇ?
***
No comments:
Post a Comment