Tuesday, 20 August 2013

ತಾಯಿ

ಗಂಗಾಧರ ಚಿತ್ತಾಲ
ಗಂಗಾಧರ ಚಿತ್ತಾಲ















ಕಂಡವರೆಲ್ಲ ಹೇಳುತ್ತಾರೆ ಅಲ್ಲಿ ಈಗ ಏನೂ ಉಳಿದಿಲ್ಲ.

ಮನೆ ನಿಂತ ಜಾಗ ಸಾಪುಸಪಾಟು, ಪೋಲಿದನ ಬಂದು 
ಸಗಣಿಯಿಕ್ಕಿ ಮೆಲಕುತ್ತಾವೆ.
ಹಾಳು ಸುರಿಯುವ ಹಿತ್ತಿಲಲ್ಲಿ ಬೆಳೆದಿದ್ದಾವೆ
ಕಾಡು ಗಿಡಗಂಟಿ ಮೆಳೆ.
ಹೂವು ಹೇರಿದ ಬೇಲಿ ಜಿಗ್ಗು ಒಟ್ಟುವ ನೆರೆಯ
ಶೂದ್ರರೊಲೆಗಳಿಗೆಲ್ಲ ಎಂದೊ ಪಾಲು.

ಮುತ್ತಜ್ಜ ನೆಟ್ಟ ಹೆಮ್ಮಾವು ಮರವಿತ್ತಲ್ಲ-
ಮುದಿಯನಿಗೆ ಎಂದಾದರೊಮ್ಮೆ ಒಂದಿಷ್ಟು ಮಿಡಿ ಹಿಡಿಯಿತೇ
ನುಗ್ಗಿ ಕೋಡಗಪಾಳ್ಯ ಜಗಿದು ಚೆಲ್ಲುತ್ತಾವೆ.

ಸುತ್ತ ಕಟ್ಟಿದ ಅಡ್ಡೆ ಹತ್ತೆಡೆಗೆ ಹಿಸಿದು
ಹೊಯಿಗೆ ಎಲ್ಲ ಗದ್ದೆಗೆ ಹರವಿ
ಕಾಕಪೋಕರಿಗೆಲ್ಲ ಹಾದಿಬೀದಿ.

ಇರುಳಲ್ಲಿ ಒಮ್ಮೊಮ್ಮೆ ನೆರಳುಗಳ ಕಂಡಂತೆ
ನಾಯ ಬೊಗಳು.
ನರಿಬಳ್ಳುಗಳು ಕೂಡಾ ಇಲ್ಲಿಯವರೆಗು ಬಂದು
ಹುಯ್ಲು ಕೂಗುವದುಂಟು.

ಕಂಡವರೆಲ್ಲ ಹೇಳುತ್ತಾರೆ ಅಲ್ಲಿ ಈಗ ಏನೂ ಉಳಿದಿಲ್ಲ.

ನನ್ನ ನೆನಪಲ್ಲಿ ಮಾತ್ರ 
ಹರಿಯುತ್ತಲೇ ಇದೆ ನೀರು ಹಿತ್ತಿಲ ತುಂಬ
ದೊಟ್ಟೆಯಿಂದೆತ್ತಿ ತೊಟ್ಟಿಗೆ ಚೆಲ್ಲಿ ಸುರುವಿದ್ದು
ಟಿಸಿಲುಟಿಸಿಲಾಗಿ ತೋಡುಗಳುದ್ದ ಹರಿದೋಡಿ
ಪಾತಿಪಾತಿಗೆ ಹಾಯ್ಸಿ ತೋಕಿದ್ದು
ಸಬ್ಜೆಗೆ, ತುಳಸಿಗೆ, ನಿತ್ಯ ಪುಷ್ಪಕ್ಕೆ ಅಕ್ಕರೆಯಿಂದ
ಚೊಂಬಿನಡಿ ಕೈ ಹಿಡಿದು ತುಂತುರಿಸಿ ಹನಿಸಿದ್ದು,

ನೆನೆಸುತ್ತಲೇ ಇದೆ
ಕೈಕಾಲ್ಗೆ ಮೆತ್ತಿದ ಒದ್ದೆ ಮಣ್ಣು, ನೀರುಂಡು
ಹಸುರಿಸಿದ ಆ ಮಣ್ಣ ತೇವು ತಂಪು

ಕೆಸರ ಕಸುವಿಗೆ ಹಿಗ್ಗಿ ಗೊನೆ ಬಾಳೆ ಹಿಡಿದ ಹೊಂಬಾಳೆ
ಬಚ್ಚಲ ರೊಚ್ಚೆಯಲ್ಲಿ ಕರ್ರಗೆ ಸೊಕ್ಕಿ ಹಬ್ಬಿದ ಬಸಲೆ
ಗರಿಚವರ ಬೀಸಿ, ಹಿಂಡಿಗೆ ಜೋತು, ಎತ್ತರಕೆ
ತೂಗಿ ತೊನೆಯುವ ತೆಂಗು

ಸುತ್ತಲೂ
ಬೆಳೆವ ಗಿಡಬಳ್ಳಿಗಳ ಮೈರಸದ ಸರಭರ
ಸದ್ದು ಸೊಗಸು

ಮಧ್ಯದಲ್ಲೇ ತಾಯಿ!
(ಮೂವತ್ತು ವರುಷಗಳ ನಂತರ ಹೆಸರೆತ್ತಿದರು
ನೀರೂರಿ ಇನ್ನೂನು ಹೇಗೆ ಸೆಲೆವುದು ಬಾಯಿ!)

ಏಳು ಮಕ್ಕಳ ಹೊರೆದು 
ಕೆಮ್ಮಿಕೆಮ್ಮಿಕೆಮ್ಮಿ ಸಣ್ಣಾದವಳು
ಒಳಗೊಳಗೇ ಒರಲೆ ಹತ್ತಿ ಮೈಗೂಡು ಕಳಚಿ ಮಣ್ಣಾದವಳು

ಆದರೂ ಹೇಗೆ ನೋಡಿಕೊಂಡಳು ನಮ್ಮನ್ನ!
ಎಂದಳು ನಾವಷ್ಟೇ ತನ್ನ ಪಾಲಿಗೆ ಬಂದ ರನ್ನ ಚಿನ್ನ.

ಒಂದು ಬಿರುಸಾಡಲಿಲ್ಲ, ಒಂದು ಉರಿಸ್ಯಾಡಲಿಲ್ಲ
ಎಂಥ ಬಡತನದಲ್ಲೂ ಝಳ ಹತ್ತಗೊಡಲಿಲ್ಲ

ಕಮ್ಮಿ ಎನಿಸಲೇ ಇಲ್ಲ ಯಾವ ನೆಮ್ಮದಿಗೂ ಉಂಡಷ್ಟು ದಿನ
ಆ ಕೈಯ ಮಮತೆಯ ಅನ್ನ!

ಇಂದಿಗೂ ಅದೇ ಕಣ್ಣ ಕಾವಲ ನೆನಪು, ಅದೇ ನೀರುಂಡ ಮಣ್ಣುತಂಪು
ಊಡುತಿದೆ ತಾಯಿಬೇರು

ಹೇಗೆ ಒಪ್ಪಲಿ ಈಗ ಏನೂ ಉಳಿದಿಲ್ಲವೆಂಬ ದೂರು?

***

No comments:

Post a Comment