Friday 30 August 2013



ಚೈತನ್ಯದ ಚಿಲುಮೆಗಳ ನಡುವೆ.............

ಕೆ. ನೀಲಾ

Neela K Gulbarga

ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ದಾವಣಗೇರೆ ಅಂತೆಲ್ಲ ಸುತ್ತಾಡಿದೆ. ಅವ್ವ ಹೇಳಿದ್ದು ಖರೆ. ಕಾಲಲ್ಲಿ ನಾಯಿಗೆರೆ ಇವೆ. ಇಲ್ಲದಿದ್ದರೆ ಹೀಗೆ ಗರಗರಗರಾಂತ ಹೇಗೆ ತಿರುಗುತ್ತಿದ್ದೆ? ಕಿಟಕಿಯಿಂದ ಹೊರಗಿಣುಕಿದೆ. ಹಿಂದೆ ಗಣಿ ಧೂಳಿನ ಧಾಳಿಯಿಂದ ನರಳುತ್ತಿದ್ದ ಗಿಡಗಂಟೆಗಳು ಈಗ ತಮ್ಮ ನೈಜ ಮುಖದೋರಿವೆ. ಹರ್ಷದಿಂದ ಉದುರಿದ ಮಳೆಹನಿಗಳಿಗೆ ನಳನಳಿಸಿ ಪ್ರತಿಕ್ರಿಯಿಸಿದ ಹಸಿರಿಗೆ ಮನಸೇನೋ ಉಲ್ಲಾಸಗೊಂಡಿತು. ಆದರೆ ಹೊಸಪೇಟೆಯ ವಿಕಲಚೇತನ ಮಹಿಳೆಯರ ಸಮಾವೇಶಕ್ಕೆ ಬರುವ ಹೊತ್ತಿಗೆ ದೇಹ ದಣಿದಂತಾಯಿತು. ಉಸ್ಸೆನ್ನುವ ಹೊತ್ತಿಗೆ ಪುಟ್ಟ ಗೆಳತಿ ಪೂರ್ಣಿಮಾ ಎರಡೂ ಬಗಲಲ್ಲಿ ಕಟ್ಟಿಗೆಗಳನ್ನಿಟ್ಟುಕೊಂಡು ತುಂಬ ಉತ್ಸಾಹದಿಂದ ಮತ್ತು ಅಷ್ಟೇ ವೇಗದಲ್ಲಿ ನಗುತ ಬರುತ್ತಿರುವುದು ಕಾಣಿಸಿತು. ಓಹ್, ಎಷ್ಟು ವರ್ಷಗಳಾದವು ಇವಳನ್ನು ನೋಡಿ. ನಾವಿಬ್ಬರೂ ಏಕಕಾಲಕ್ಕೆ ನೆನಪುಗಳಿಗೆ ಜಾರಿದೆವು ಮತ್ತು ಭೇಟಿಯಾದ ಉಮೇದಿನಲ್ಲಿ ಕಣ್ಣ ಕೊನೆಗೆ ಹನಿಯಾಗಿಯೂ ನಿಂತೆವು

ಹೌದು. ಹತ್ತು ವರ್ಷಗಳ ಹಿಂದೆಯೇ ಇರಬೇಕು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ಸೋಷಿಯಲ್ ವರ್ಕ್ಸ್ ಅಡ್ಮಿಷನ್ ಕೇಳಿ ಬಂದಿದ್ದಳು ಪೂರ್ಣಿಮಾ. ಅವಳ ಎರಡೂ ಅರೆಪೋಲಿಯೋ ಪೀಡಿತ ಕಾಲು-ಕೈಗಳನ್ನು ನೋಡಿ 'ನಿನಗೆ ಕ್ಷೇತ್ರ ಕಾರ್ಯ ಮಾಡಲಾಗದು..' ಎಂದು ಅವಳಿಗೆ ಅಡ್ಮಿಷನ್ ನಿರಾಕರಿಸಿದರು. ಆಪರೆಷನ್ ವೈಫಲ್ಯದಿಂದ ಕಾಲುಗಳೆರಡನ್ನೂ ಕಳೆದುಕೊಂಡ ಸುರೇಶ ಕುಷ್ಟಗಿ, ಅಂಗವಿಕಲರ ಮತ್ತು ಪಾಲಕರ ರಾಜ್ಯ ಮಟ್ಟದ ಒಕ್ಕೂಟದ ಮುಖಂಡರು. ಅವರು ವಿಭಾಗದ ಮುಖ್ಯಸ್ಥರಿಗೆ ಫೋನು ಮಾಡಿ 'ಅಂಗವೈಕಲ್ಯ ಅಕಿಗಲ್ಲ. ನಿಮ್ಮ ಬುದ್ದಿಗೆ ಅಂಗವಿಕಲತೆಯಿದೆ...' ಎಂದು ಜಗಳವಾಡಿದ್ದರು. ಅನಿವಾರ್ಯವಾಗಿ ಮಹಿಳಾ ಅಧ್ಯಯನ ಮಾಡಿಕೊಂಡು ಪೀಜಿ ಮುಗಿಸಿಕೊಂಡ ಪೂರ್ಣಿಮಾ ಈಗ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಿ. ಅವಳು ಸಭೆಯನ್ನುದ್ದೇಶಿಸಿ ಮಾತಾಡತೊಡಗಿದಳು. 'ನಮಗೆ ಪ್ರತ್ಯೇಕ ಸಾಮರ್ಥ್ಯವಿದೆ. ಅದನ್ನು ಗುರುತಿಸಬೇಕು. ಕೊಪ್ಪಳ ಜಿಲ್ಲೆಯ 775 ಹಳ್ಳಿಗಳನ್ನೂ ಸುತ್ತಾಡಿದ್ದೇನೆ. ಅಂಗವೈಕಲ್ಯವೆನ್ನುವುದು ಎಷ್ಟೊ ಸಾರಿ ಮನಸ್ಸಿನೊಳಗೂ ಹೊಕ್ಕಿ ನಮ್ಮನ್ನು ಕುಗ್ಗಿಸುತ್ತದೆ. ನಾವದನ್ನು ಕಿತ್ತು ಹಾಕಬೇಕು. ಎಲ್ಲವನ್ನೂ ಎದುರಿಸಲು ಮನಸು ಸಜ್ಜುಗೊಳಿಸಿಕೊಳ್ಳಬೇಕು. ದುಪ್ಪಟ್ಟು ಇಚ್ಛಾಬಲದಿಂದ ಮುನ್ನುಗ್ಗಿದಲ್ಲಿ ಸಾಧನೆಯ ಹಾದಿ ತಂತಾನೆ ತೆರೆದುಕೊಳ್ಳುತ್ತದೆ...' ಪೂರ್ಣಿಮಾಳ ಮಾತು ಕೇಳುತ್ತ ಬೆರಗು, ಖುಷಿಯಲ್ಲಿ ಹಗುರಾಗತೊಡಗಿದೆ. ಕೈ-ಕಾಲು-ಮೈಯೆಲ್ಲ ನೆಟ್ಟಗಿದ್ದೂ ಹತ್ತು ಹಳ್ಳಿಗಳು ಸಹ ಸುತ್ತಾಡದೆ ಮಾಸ್ಟರ್ ಸರ್ಟಿಫಿಕೇಟ್ ಪಡೆದ ಅನೇಕರು ಕಣ್ಣ ಮುಂದೆ ಬಂದರು. 


ಸಭೆಗೆ ಬರುವವರ ಸಂಖ್ಯೆ ಹೆಚ್ಚತೊಡಗಿತು. ಯುವತಿಯರು. ಎಳೆ ಹೆಂಗೂಸುಗಳು. ವಯಸ್ಸಾದ ತಾಯಂದಿರು. ಕಾಲು, ಕೈ, ಕಣ್ಣು ಹೀಗೆ ಒಂದಿಲ್ಲ ಒಂದು ಅಂಗವು ಇಲ್ಲದ್ದರಿಂದ ಅನುಭವಿಸುತ್ತಿರುವ ಸಂಕಟಗಳನ್ನು ಬಿಚ್ಚಿಡತೊಡಗಿದರು. ಹಗರಿಬೊಮ್ಮನಹಳ್ಳಿಯ ಯುವತಿಯೊಬ್ಬಳು ಕಣ್ಣಿಲ್ಲದ್ದಕ್ಕೆ ತನ್ನ ಮೇಲೆ ಧಾಳಿ ಮಾಡಿದವರನ್ನು ಎದುರಿಸಿದ ಬಗೆ ಹೇಳುವಾಗ ಎಲ್ಲರ ಕಣ್ಣಲ್ಲಿ ನೀರಾಡುತ್ತಿತ್ತು. ಅವಳು ಮುಂದುವರೆದು 'ಕರುಣೆ-ಅನುಕಂಪ ಬೇಕಿಲ್ಲ. ಸ್ವಾಭಿಮಾನದಿಂದ ದುಡಿದುಣ್ಣಲಿಕ್ಕೆ ಅನುಕೂಲ-ಅವಕಾಶ ಬೇಕು' ಈಗ ಎಲ್ಲರ ಕಣ್ಣಂಗಳದಲ್ಲಿ ಹನಿಯಾರಿ, ಆಲೋಚನೆಯ ಅರಿಗಣ್ಣು ತೆರೆದುಕೊಂಡಿತು. ಅನಕ್ಷರಸ್ಥರೂ ಇದ್ದರು. ಅನೇಕ ಯುವತಿಯರು ಎಂಟನೆ ಹತ್ತನೆ ಮುಗಿಸಿದವರೂ. ಮುಂದೇಕೆ ಓದಿಲ್ಲ? ಓದಲಿಚ್ಛೇಯಿಲ್ಲವೇ? ಹೆತ್ತವರು ಪ್ರೀತಿಸುವರೆ? ಸಮಾಜದ ವ್ಯಂಗ್ಯಕ್ಕೆ ಒಳ-ಒಳಗೇ ಮುರುಟಿಕೊಂಡವರೂ ಇದ್ದರು. ಹೆತ್ತವರ ಪ್ರೀತಿಯ ಸಂತೃಪ್ತಿಯಲ್ಲಿ ಬಂದಿದ್ದನ್ನು ಎದುರಿಸುವ ಛಾತಿಯ ಹುಡುಗಿಯರಿಗೇನೂ ಕೊರತೆಯಿರಲಿಲ್ಲ. ಹಗರಿಬೊಮ್ಮನಹಳ್ಳಿಯ ಏಣಗಿಬಸಾಪೂರಿಗೆ ಬಸ್ಸಿಲ್ಲ. ಮೂರು ಕಿಲೋ ಮೀಟರ್ ನಡೆಯಬೇಕು. 'ನಂಗೊಂದು ರಾಟಿ(ಹೊಲಿಗೆಯಂತ್ರ) ಕೊಡಿಸಿದ್ರೆ ಟೈಲರಿಂಗ್ ಮಾಡ್ಕೊಂಡು ಜೀವನ ಸಾಗಿಸ್ತೇನೆ' ಅನ್ನುವ ಕೊಟ್ರಮ್ಮ. ಬಹುತೇಕ ಹುಡುಗಿಯರು ಟೈಲರಿಂಗ್ ಸಾಕು ಅನ್ನುವವರೇ. ಸಾಧ್ಯವಾದಷ್ಟು ಜನಸಮೂಹದಿಂದ ದೂರ ಸರಿಯುವ ಮನಸ್ಥಿತಿ. ಕಾಲು ಊನವಿಟ್ಟುಕೊಂಡೂ ಕೂಲಿ ಮಾಡಿ ಮನೆ ನಡೆಸುವ ರತ್ನಮ್ಮ ಹತ್ತನೆ ಓದಿದ್ದಾಳೆ. 'ಮುಂದಕ್ಕೆ ಓದಿದರೆ ಮನೆ ನಡಿಯಾದು ಹೆಂಗಕ್ಕ?' ಏನೆಂದು ಉತ್ತರಿಸಲಿ? ಬಿಎಡ್ ಓದಿದ ಲಕ್ಷ್ಮಿ ಸಮಾಜದ ವ್ಯಂಗ್ಯಕ್ಕೆ ನೊಂದಿದ್ದಾಳೆ. ಆದರೂ ಜೀವನ ಜೈಸುವ ಛಲ. ಮ್ಯೂಜಿಕ್ನಲ್ಲಿ ಡಿಗ್ರಿ ಮಾಡಿಕೊಂಡ ರುಖಿಯಾಬೇಗಂ ಅದ್ಭುತ ಕಂಠದ ಒಡತಿ. ಬಸವಣ್ಣನ ವಚನವು ಅವಳ ಕೊರಳಿನಿಂದ ಲಯಬದ್ದವಾಗಿ ಪಯಣಿಸುತ ಎಲ್ಲರ ಹೃದಯ ತಟ್ಟುತ್ತಿತ್ತು. ಕಂಗಳ ದೃಷ್ಟಿಯು ಅವಳ ಸ್ವರ ಸೇರಿದೆಯೇನೋ.. ಮುಚ್ಚಿದ ರೆಪ್ಪೆಯೊಳಗೆ ಶಿಕ್ಷಕಿಯಾಗುವ ಕನಸುಗಳಿವೆ. ಕಣ್ಣಿಲ್ಲದ ಹುಚ್ನಿಂಗಮ್ಮ ದೇವದಾಸಿ. ಮನೆಯೊಂದನ್ನೂ ಕೊಡದ ಗ್ರಾಮ ಪಂಚಾಯತ್ ಧೋರಣೆ ಸರಿಯೇ? ಪ್ರಶ್ನಿಸಿದಳು.


ಒಬ್ಬಳು ಹೊರತುಪಡಿಸಿದರೆ ಮದುವೆಯಾದ ಯುವತಿಯರಿರಲಿಲ್ಲ. ಲಕ್ಷ್ಮಿಗೆ ತಾನು ಕಣ್ಣಿಲ್ಲದವಳೆಂದು ಅರೆಹುಚ್ಚನೊಂದಿಗೆ ಮದುವೆ ಮಾಡಿದ್ದರಂತೆ. ಸತ್ಯ ತಿಳಿದ ಮೇಲೆ ವಿಚ್ಛೇದನ ಪಡೆದ ಕತೆ ಹೇಳಿದಳು. 'ಫೇರ್ ಅಂಡ್ ಲೌವ್ಲಿ ಹಚ್ಚಿಕೊಂಡಾದರೂ ಬೆಳ್ಳಗಾಗಿ ಮದುವೆಗೆ ಯೋಗ್ಯವಾಗುವ ಕನಸು ಕಾಣುವಂತಾಗುತ್ತಿರುವ ಹೊತ್ತಿನಲ್ಲಿ, ನಮ್ಮನ್ನು ಮದುವೆಯಾಗಲಿಕ್ಕೆ ಯಾರು ಬರ್ತಾರಕ್ಕ? ನಮಗೆ ಮದುವೆ ಬ್ಯಾಡ. ದುಡಿದುಣ್ಣಲಿಕ್ಕೆ ಉದ್ಯೋಗ ಕೊಟ್ರೆ ಸಾಕು'. ಬಯಕೆಗಳೇ ಭಸ್ಮವಾಗುವ ಪರಿಗೆ ಏನೆನ್ನಲಿ? ಕಲ್ಲು ಕರಗುವ ಸಮಯ. ಅಲ್ಲಿ ಸಂಕಟದ ಕಡಲು ಭೋರ್ಗರೆಯುತ್ತಲೇ ಇತ್ತು. ಕಣ್ಣ ಮುಂದೆ ಸಾರ್ವಜನಿಕ ಸ್ಥಳಗಳು ಕಚೇರಿಗಳು ದೇವಸ್ಥಾನ-ದರ್ಗಾ-ಚರ್ಚ್, ತರಬೇತಿ ಸಂಸ್ಥೆಗಳು ತೆರೆದುಕೊಳ್ಳತೊಡಗಿದವು. ಇವರೆಲ್ಲ ನಡೆದಾಡಲು-ಬಳಸಲು ಯೋಗ್ಯವಾದ ವ್ಯವಸ್ಥೆ ಅಲ್ಲಿ ಕಲ್ಪಿಸಲಾಗಿದೆಯೇ? ಬಸ್ಸು-ರೇಲ್ವೆ..ಮತ್ತೆಲ್ಲ ವಾಹನಗಳೂ ಹೀಗೆಯೇ. ದುರಂತವೆಂದರೆ ಸರಕಾರಿ ಹಾಗೂ ಸ್ವಯಂ ಸೇವಾಸಂಸ್ಥೆಗಳ ಕಾರ್ಯಕ್ರಮಗಳೂ ಲಿಂಗಸಂವೇದನಾರಹಿತವಾಗಿವೆ. ಸಮಾಜವು ಸಹ ಅಂಗವಿಕಲ ಮಹಿಳೆಯರ ಕುರಿತು ನಕಾರಾತ್ಮಕ ನಿಲುವು ಹೊಂದಿದೆ. ನಗರಗಳಲ್ಲಿಯೇ ಇಂಥ ಸ್ಥಿತಿಯಾದರೆ ಗ್ರಾಮೀಣ ಪ್ರದೇಶದಲ್ಲಿರುವವರ ಗತಿಯೇನು? ದಲಿತ ಅಂಗವಿಕಲ ಮಹಿಳೆಯರು ಜಾತಿ ತಾರತಮ್ಯಕ್ಕೂ ಒಳಗಾಗುವರು. ಇತ್ತೀಚೆಗೆ ಬುದ್ದಿಮಾಂದ್ಯ ಮತ್ತು ಅಂಗವಿಕಲ ಮಹಿಳೆಯರ ಮೇಲೆ ಅತ್ಯಾಚಾರ-ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಬಡತನದಲ್ಲಿರುವ ಮಹಿಳೆಯರು ಎಲ್ಲ ತೆರನ ಸಂಕಷ್ಟಗಳಿಗೆ ಒಳಗಾಗುವರು. 

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ)ಯ ಸರ್ವೆಯಂತೆ ಅಂಗವಿಕಲ ಗಂಡುಮಕ್ಕಳು ಶೇ.2 ಮಾತ್ರ ಶಾಲೆಯ ಮೆಟ್ಟಿಲು ಹತ್ತುವರು. ಅವರಲ್ಲಿಯೇ ಶೇ.82 ಪ್ರಾಥಮಿಕದಲ್ಲಿ ಮತ್ತು ಶೇ.90 ಸೆಕೆಂಡರಿಯಲ್ಲಿ ಮಕ್ಕಳು ಶಾಲೆ ಬಿಡುವರು. ಹೆಣ್ಣುಮಕ್ಕಳ ಸಂಖ್ಯೆ ಸೊನ್ನೆಯಿಂದ ಕೆಳಗಿದೆ. ಸಾರಿಗೆ, ಶಾಲಾ-ಕಾಲೇಜುಗಳ-ವಸತಿನಿಲಯಗಳ ಕಟ್ಟಡಗಳು ಸುಲಭಲಭ್ಯವಾಗಿಲ್ಲ. ಅದರಲ್ಲಿಯೂ ಶೌಚಾಲಯ ಅಂಗವಿಕಲ ಮಹಿಳೆಯರಿಗೆ ಬಳಸಲು ಯೋಗ್ಯವಾಗಿರುವುದಿಲ್ಲ. ಅಂಗವಿಕಲ ಹುಡುಗಿಯರು ಶಾಲೆಗೆ ಹೋಗುವುದು ಹೇಗೆ? ಹಾಗೆ ನೋಡಿದರೆ ಅಂಗವಿಕಲರಿಗಾಗಿ 82 ಸರಕಾರಿ ಆದೇಶಗಳಿವೆ. ಕೇಂದ್ರ ಸರಕಾರ 3% ರಾಜ್ಯ ಸರಕಾರ 5% ಮೀಸಲಾತಿ ಒದಗಿಸಿದೆ. ಆದರೆ ಎಷ್ಟೋ ಜಿಲ್ಲೆ-ತಾಲ್ಲೂಕುಗಳಲ್ಲಿ ಈ ಹಣವು ಸದ್ಬಳಕೆಯಾಗಿಯೇ ಇಲ್ಲ. 
ಅಂಗವಿಕಲ ಮಹಿಳೆಯರು ಲಿಂಗತಾರತಮ್ಯಕ್ಕೂ ಜಾತಿಭೇದಕ್ಕೂ, ಅಂಗವಿಕಲತೆಗೂ ಬಲಿಯಾಗುತ್ತಿರುವರು. ಜೊತೆಗೆ ಅಭಿವೃದ್ಧಿಶೀಲ ದೇಶಗಳ ಆರ್ಥಿಕ-ಸಾಮಾಜಿಕ ಹಿಂದುಳಿವಿಕೆಯ ದುಷ್ಪರಿಣಾಮಕ್ಕೂ ಒಳಗಾಗುತ್ತಿರುವರು. ಅಂಗವಿಕಲ ಮಹಿಳೆಯು ವಿವಾಹಕ್ಕೆ, ಮಕ್ಕಳ ಪಾಲನೆ-ಪೋಷಣೆಗೆ ಯೋಗ್ಯವಾಗಿಲ್ಲವೆಂಬ ತಪ್ಪಭಿಪ್ರಾಯ ಸಮಾಜ ಹೊಂದಿದೆ. ಇದು ತೊಡೆಯಬೇಕಿದೆ. ಹೀಗಾಗಿ ಅವಿವಾಹಿತರ ಸಂಖ್ಯೆ ಜಾಸ್ತಿ ಇದೆ. ವರನೊಬ್ಬ ಹಣದಾಸೆಗೆ ಮದುವೆಯಾದರೂ ಗಂಡನ ಮನೆಯಲ್ಲಿ ಕಿರುಕುಳ ಮತ್ತು ವಿಚ್ಛೇದನಗಳು ವ್ಯಾಪಕವಾಗಿ ನಡೆಯುತ್ತವೆ. ಆರೋಗ್ಯ ಕೆಟ್ಟಾಗ ತೀರ ಸಂಕಟದ ಪರಿಸ್ಥಿತಿ ಎದುರಿಸುವರು. ಪುನರ್ವಸತಿಗಳು ಸಮಗ್ರ ಕಣ್ಣೋಟದ ವ್ಯವಸ್ಥೆ ಇರುವುದು ತೀರ ಕ್ವಚಿತ್. ಇನ್ನು ಸರಕಾರಕ್ಕಂತೂ ಅಂಗವಿಕಲ ಮಹಿಳೆಯರ ಕುರಿತು ಪ್ರತ್ಯೇಕ ಮತ್ತು ನಿರ್ಧಿಷ್ಟ ಧೋರಣೆ ಇಲ್ಲವಾಗಿದೆ. ಅವರಿಗೆ ನ್ಯಾಯಾಂಗ, ಪೋಲಿಸ್ಠಾಣೆ, ಕಾನೂನು ಸುಲಭ ದೊರೆಯುವಂತಾಗಬೇಕಲ್ಲವೇ? ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಪುನರ್ವಸತಿಯ ಖಾತ್ರಿಯನ್ನು ಸರಕಾರ ಹಾಗೂ ಸಮಾಜ ಕೊಡಬೇಕಿದೆ. ಅನುಕಂಪ ಬೇಡ. ಸ್ವಾಭಿಮಾನದ ಜೀವನಕ್ಕೆ ಅವಕಾಶ ಬೇಕೆಂಬ ಅವರ ಹಕ್ಕೊತ್ತಾಯ ಕಿವಿಯಲ್ಲಿ ಅನುರಣಿಸುತ್ತಲೇ ಇದೆ. 

***

No comments:

Post a Comment