Thursday, 8 August 2013

ಅಣ್ಣ                                        ಗಂಗಾಧರ ಚಿತ್ತಾಲ           



                                                                                           


ಮಣ್ಣ ಹಣತೆಯ ಸಣ್ಣ ಸೊಡರ ಮಿಣಿಮಿಣಿ ಬದುಕು
ಎಂದರೇ ತಾತ್ಸಾರ ಇವಗೆ.

ಎನುತಿದ್ದ
ಈ ತೆರನ ಬತ್ತಿ ಸೊರಗಿಸಿ ಎಣ್ಣೆ ಜಿಡ್ಡು ಸರಿಸುವ
ಜಿಪುಣ ಗತ್ತು
ಯಾವ ನರಜೀವಕೂ ಗೊತ್ತು.

ತಾನೊ
ಉರಿಸಬೇಕು ಮಶಾಲು
ಇದ್ದಷ್ಟು ಕಾಲ ಇರುವಷ್ಟು ಪ್ರಾಣದ ತೈಲ-
ವೆರೆದು ಝಗಝಗ ಬೆಳಗಿ ಬೆಳಕ ಸುರಿಸಿ
ಎದಗೆದೆಯ ಬೆಸೆವ ಕಣ್ಗೆಸೆವ ಜೀವಜ್ವಾಲೆ!

ದುಂದು ಮೆರೆವವಗೆ ಅರವಾಸಿ ಆಯುಷ್ಯವೇ?
ಅದರದೇನು ಬಿಶಾತು
ಕರೆಬಂದ ಕ್ಷಣಕೆ ಮರಳಲೆಂದೆ ಬಂದವರಲ್ಲೆ
ಇಲ್ಲೆ ನಾವೂ ನೀವೂ?


ಕೆಲವರಿಗೆ ಈ ಜಗತ್ತು ಅವಲೋಕನಕ್ಕೆ ವಸ್ತು
ಕೆಲವರಿಗೆ ತಬ್ಬಿಕ್ಕಿ ತುಟಿಯೂರಿ ಚೀಪಬೇಕೆನಿಸುವ
ಮಾಂಸಲ ವಕ್ಷ.
ಇನ್ನು ಕೆಲವರಿಗೆ ಕಡೆಯಬೇಕು, ಮಿದಿಸಬೇಕು,
ಮೂರ್ತಿಸಲೇಬೇಕೆಂಬ ಧ್ಯಾಸ ಹಿಡಿಸುವ ಕಲ್ಲು, ಕೈಮಣ್ಣು.

ತಮ್ಮಣ್ಣಗೋ ಇದೆಲ್ಲ ತನ್ನ ಕುಟುಂಬ
ಯಾರು ಸಿಕ್ಕರೂ ಗೆಳೆಯ ಸಂಗಾತಿಯೇ ಎಂಬ
ಹುರುಪು, ಬೆಚ್ಚಗೆ ಬೆಳೆದ ಬಂಧುಭಾವ
ಹೊತ್ತಾರೆ ಎದ್ದವಗೆ ಒಂದರಲ್ಲೆ ಜೀವ:
ಜನಕರೆಸಿ, ಜನನೆರೆಸಿ, ಮನಮುಟ್ಟಿ ಒಲಿಸೋದು
ಹತ್ತು ಯೋಜನೆ ಹೂಡಿ ಹುರಿದುಂಬಿ ನಿಲಿಸೋದು
ಅದನೆತ್ತೋದು, ಇದ ಕಟ್ಟೋದು, ಹಿಗ್ಗೋದು
ಪ್ರಾಣ ಸಾಲದ ದೇಹ ಬಿರಿಕುಂಟೆಯಂತೆ ಕೊರಳಿಗೆ
ಜೋತುಬಿದ್ದರೂ
ಕರೆಬಂದ ಕಡೆಗೆಲ್ಲ ನುಗ್ಗೋದು!

ಆಡುವವರೆಲ್ಲ ಆಡಿಕೊಂಡರು:
ಹೊಟ್ಟೆಮಕ್ಕಳಿಗಾಗಿ ಘಳಿಗೆ ಪುರುಸೊತ್ತಿಲ್ಲ,
ಲೋಕ ಕಟ್ಟುತ್ತಾನೆ.
ಇವನೆ ತರಬೇತಿಸಿದ ನಿನ್ನೆಮೊನ್ನೆಯ ಹುಡುಗ
ಮಹಲು ನಿಲ್ಲಿಸಿದರೂ, ಇವಗೆ ಬಾಡಿಗೆಯ ಮನೆ.
ತಂದ ನೆಣ ತೀರುತ್ತಬಂದರೂ ಹೊತ್ತಿಸಿದ ಬತ್ತಿ
ಇಬ್ಬದಿಗೂ ಉರಿಸುತ್ತಾನೆ.
ತನ್ನ ಪಾಡಿಗೆ ತಾನು ಸುಮ್ಮನಿರಬಾರದೇ,
ಒಂದು ಕಾಸೂ ಬರದ ಈ ಎಲ್ಲ ವ್ಯಾಪ
ಹೆಗಲಿಗೆ ಹೇರಿದವರ್‍ಯಾರು?

ಜಾಗರೂಕರ ಹಿಶೇಬಿ ಲೆಕ್ಕಾಚಾರ ಸಾಹಸಕೆ ತುಡಿವ
ಜೀವಕ್ಕೆ ಹಿಡಿಸೀತೆ?
ಹುಟ್ಟಿನಿಂದಲೆ ತಂದ ಒಡನಾಟದೀ ಹಸಿವು ಉಸಿರಾಟವಿರುವನಕ
ಇವಗೆ ಬಿಡಿಸೀತೆಂತು?




ಓಡೋಡಿ ಬಂದವನೆ ನೇರ ಕೋಣೆಗೆ ನುಗ್ಗಿ
ಅಣ್ಣಾ ಎಂದೆ.
ಕಣ್ಣರೆಪ್ಪೆಯು ಕೂಡ ಅಲುಗಲಿಲ್ಲ.

ಅಂಗಾತ ಬಿದ್ದಿತ್ತು ದೇಹ ಗೊರಗೊರಿಸುತ್ತ.
ನೋಟವಿಲ್ಲದ ಗಾಜುಗಣ್ಣು, ಬಿಸಿಕಳಕೊಂಡು
ಊದಿ ನೆಟ್ಟಗೆ ಸೆಟೆದ ಕೈಕಾಲು. ಉಸಿರ ತಿದಿ ಮಾತ್ರ
ಅತಂತ್ರ ಒತ್ತುತ್ತಿತ್ತು ಕೊನೆಯ ಉಬ್ಬಸ ಹತ್ತಿ.

ಬೆನ್ನುಹುರಿಯಲ್ಲಿ ತಣ್ಣೀರು ಸುರಿದಂತಾಯ್ತು
ತಟ್ಟನೆ ಅರಿವು ಮೂಡಿ:

ಈ ಜೀವ ಇನ್ನಿಲ್ಲ
ಹುಡುಗನಂತೋಡಾಡಿ
ಕನಸುಗಳ ಬೆನ್ನಟ್ಟಿದೀ ನಿರಾಗಸ ಪ್ರಾಣಿ ಇನ್ನಿಲ್ಲ
ಕಂಡ ಕಂಡವರೊಡನೆ ಮಮತೆ ಬೆಳೆಸಿ, ಬಳಗ ಕಟ್ಟಿದ
ನಿತಾಂತ ಸ್ನೇಹಿ ಇನ್ನಿಲ್ಲ.

ದೇಹದ ಸ್ವಾಸ್ಥ್ಯ ಧಿಕ್ಕರಿಸಿ ತೊಳಗಿದವ
ಜೀವನೋತ್ಸಾಹ ಪುಟಿಪುಟಿದು ಜೀಕಳಿಸಿದವ
ಗಡಿಗೆರೆಯ ದಾಟಿ ಕತ್ತಲಲ್ಲಿ ಕೂಡಿದ್ದಾನೆ
ಇನ್ನು ಎಂದೆಂದಿಗೂ ಮರಳಿಬಾರ!

ಮೊನ್ನೆ ಓಡಾಡಿದವನಿಂದಿನೀ ಹೆಣ ಹೊತ್ತು
ಮಸಣ ಮುಟ್ಟಿಸಿ ಸುಟ್ಟು ಬೂದಿ ಮಾಡಿ
ಬೊಕ್ಕತಲೆ ಬರಿಗೈಲೆ ಮನೆಗೆ ಮರಳಿ
ಇವನ ಕೋಣೆಯ ಖಾಲಿ ಖಾಲಿ ಕಂಡು
ತಡೆಯಲಾರದೆ ಕೋಡಿಯೊಡೆದು ಹೋ ಹೋ ಎಂದು
ಕೂಡಿ ಅತ್ತೆವು.


ಮತ್ತೆ ಗಾಳಿಗೆ ಗಾಳಿ ಬಯಲಿಗೆ ಬಯಲು
ಆದಮೇಲೂ
ನಾಲಗೆಯ ಮೇಲೆಲ್ಲ ಇವನದೇ ಹೆಸರು, ಎದೆಯಲೆಲ್ಲ
ಇವ ಬಿಟ್ಟು ಹೋದ ಅಕ್ಕರೆಯ ಸವಿ,
ಮಕ್ಕಳ ಕಣ್ಣ ಹೊಳಪಲ್ಲಿ, ಮುಳುಗುವ ನಗೆಯಲ್ಲಿ, ಮಾತಲ್ಲಿ
ಹಣಕಿಕ್ಕುವ ಇವನದೇ ರೂಪ.

ಕೈಕುಸಿಯುವನಕವೂ ಎತ್ತಿ ಮೆರೆಸಿ ಮಶಾಲು
ಕತ್ತಲೆಗೆ ಎದುರಾಳಿಯಾಗಿ ನಿಂತ ಪ್ರತಾಪ!

ಮತ್ತೆ ಕಾಡುವ ಒಂದೇ ಪ್ರಶ್ನೆ:

ಕೊನೆಕೊನೆಯ ದಿನದಲ್ಲಿ ಹೊತ್ತೇ ಇಲ್ಲದವನಂತೆ ಓಡಾಡಿದನಲ್ಲ-
ನೆರಳಿದ್ದು ಬರುವುದು ಕಂಡಿದ್ದನೇ?
ಹೊರಡಬೇಕಾದವನು ಒಬ್ಬಂಟಿ ಎನಿಸಿ ಎದೆಗುಂದಿದ್ದನೇ?

***

No comments:

Post a Comment