Thursday 29 August 2013

ತುಂಬಿಕೊಂಡ ಖಾಲಿ



ಖಾಲಿ ಎಂದು
ತೋರಿಸಿದ ಮನೆ
ಸೇರಿಕೊಂಡೆ
ಜೋಡಿಹಕ್ಕಿಗಳ ಚಿತ್ರ ತೂಗಿದ್ದ ಜಾಗದಲ್ಲಿ
ಚಾಚಿದ ಎರಡು ಮೊಳೆಗಳು,
ಬಿಳುಚಿಕೊಂಡ ಚೌಕಾಕಾರ
ಗೋಡೆತುಂಬ ಬಾಲಬರಹ
ಒರಗಿ ಕುಳಿತಲ್ಲಿ ಜಿಡ್ಡುಮೂಡಿಸಿದ
ತಲೆ, ಬೆನ್ನು
ಅಡಿಗೆಕಟ್ಟೆಯ ದಂಡೆ ತುಂಬ ಪಾಕಕಲೆ
ಮಂಚ ಇಟ್ಟಲ್ಲಿ
ಮಾಸದ ನೆಲ
ಹಣತೆ ಉರಿದಲ್ಲಿ
ಮಸಿದೀಪ
ಕಾಲ ಬಿಟ್ಟುಹೋದ
ಕ್ಯಾಲೆಂಡರು
ಫ್ಯಾನು ಕಿತ್ತುಕೊಂಡ
ಜೀವತಂತು

ತುಂಬಿದ ಮನೆಯಲ್ಲಿ
ಧ್ಯಾನ ಸಾಧಿಸೀತೆ
ಅಥವಾ
ಎಲ್ಲವನ್ನೂ
ಖಾಲಿಮಾಡಿಕೊಳ್ಳಬೇಕೆ?

***

1 comment:

  1. ಕಾಡುವ ಕವನ
    ಹೊಂದಾಣಿಕೆ ಮತ್ತು ಬದಲಾವಣೆ
    ಸೃಷ್ಟಿಯ ಪುನರಾವರ್ತನೆಯ ನಿಯಮಗಳು
    ಎಲ್ಲಿದ್ದರೂ ಒಂದೇ

    ReplyDelete