ಆರಾಮ ಕುರ್ಚಿ
ಗಾಯತ್ರಿಬಲ ಪಂಡ
ಕಳೆದವಾರ
ಆರಾಮ ಕುರ್ಚಿಯ ಒಂದು ಸ್ಕ್ರೂ
ಕಳಚಿ ಬಿತ್ತು.
ಆವಾಗಿನಿಂದ ನಾನು ಆ
ಕಿರಿಗುಡುವ ಶಿಥಿಲ ಕುರ್ಚಿಯ ಮೇಲೆ ಕೂತಿಲ್ಲ
ಸೊಂಟನೋವು ಎಲ್ಲಿ ಹೆಚ್ಚಾದೀತೋ
ಎಂಬ ಭಯಕ್ಕೆ.
ನಾನಲ್ಲ, ನನ ತಮ್ಮ
ಅದರ ನಿಜವಾದ ವಾರಸುದಾರ.
ಅವನೀಗ ಮುಂಬಯಿಯಲ್ಲಿ.
ಆ ಮಾಯಾಂಗನೆಯ ಸೆಳವಿಂದ ತಪ್ಪಿಸಿಕೊಳಲಾಗದೇ
ಮನೆಗೇ ಬಾರ.
ಆ ಕುರ್ಚಿ
ನನ್ನಪ್ಪನಿಗೆ ಅವನಪ್ಪನಿಂದ ಬಂದದ್ದು.
ಸೂಸುತ್ತದೆ ಕಮಟು
ತಲೆಮಾರುಗಳ ಬೆವರು ನಾತ
ಅದರ ಮೇಲೊಂದು ಅಂಟಂಟು ಜಿಡ್ಡಿನ ಪದರ.
ಅದು ನಿದ್ರೆಯಿಲ್ಲ ಸುಖವಿಲ್ಲ
ಶಾಂತಿಯಿಲ್ಲ ಎಂದು
ಎಂದೂ ಆರೋಪ ಮಾಡಿದ್ದಿಲ್ಲ
ನನಗೆ ಮೂರು ವರ್ಷವಿರುವಾಗಲೊಮ್ಮೆ
ನಾಲಿಗೆಯ ಮೇಲೊಂದು ಗಾಯ ಮಾಡಿತ್ತು.
ತನ್ನ ಮೊಮ್ಮಗುವಿನ ನೆತ್ತರ ರುಚಿ ನೋಡಿದ್ದಕ್ಕೆ
ಅಜ್ಜಿ ಅದ ಮನಸಾ ಶಪಿಸಿದ್ದಳು.
ಗುಜರಿಯವನಿಗೆ ಮಾರಿಬಿಡಿ
ಎಂದು ಅಬ್ಬರಿಸಿದ್ದಳು.
ಉಗ್ರಾಣದ ನಾಲ್ಕು ಗೋಡೆಗಳ ನಡುವೆ
ಬಳಸದೆ ಮುಟ್ಟದೆ
ಅದು ವರ್ಷಗಳ ಸವೆಸಿತು.
ಆಗ, ಒಂದು ದಿನ, ನನ್ನಪ್ಪ
ಕಟಕ್‌ನಿಂದ ಮನೆಗೆ ಬಂದ.
ತನ್ನ ಹೆಗಲ ಮೇಲಣ ವಸ್ತ್ರದಿಂದ
ಅದರ ಧೂಳು ಹೊಡೆದ -
ಥೇಟ್
ಚಿಕ್ಕವರಿರುವಾಗ ನಮ್ಮ
ಬೆವರು, ಕಣ್ಣೀರು, ಸಿಂಬಳ ಒರೆಸುತ್ತಿದ್ದನಲ್ಲ,
ಹಾಗೇ.
ನಂತರ ಮೈಚಾಚಿ
ಆರಾಮ ಕುರ್ಚಿ ಮೇಲೆ ಕುಳಿತು
ನಿದ್ರಿಸಿದ.
ಅದಕ್ಕೆ ಕಣ್ಣಿಲ್ಲ
ಅದು ಅಳಲಾರದು.
ನಂತರ
ಮನೆಯಿಂದ ನನ್ನ ಹೊರಕಳಿಸಿದರು
ದುಬಾರಿ ಫರ್ನಿಚರುಗಳ ಸಮೇತ.
ಒಂದು ದಿನ
ನನ್ನ ಹೊಸಮನೆಗೆ ಅಪ್ಪ
ತನ್ನ ಸ್ಕೂಟರಿನಲ್ಲಿ ಬಂದಿಳಿದ.
ಬಂತು ಅವನ ಹಿಂದೇ
ಆ ಆರಾಮ ಕುರ್ಚಿ ಹೊತ್ತ ಟ್ರಾಲಿಯೂ
ಅದನು
ನಮ್ಮ ವೆರಾಂಡದಲಿಟ್ಟು
ಒರಗಿ ಕೂತಾಗಲೇ ತಿಳಿದಿದ್ದು
ಇದೆ ಅದಕೂ ಒಂದು ಆತ್ಮ
ಎಂದು.
ನನ್ನಂತೇ ಕಣ್ಣಿದೆ
ನನ್ನಂತೇ ಕಣ್ಣೀರು ಸುರಿಸುತ್ತದೆ
ನೋವಿಗೂ, ಬಯಸಿದ್ದು ಪಡೆದ ಆನಂದಕ್ಕೂ
ಎಂದು..
- ಒಡಿಯಾ ಮೂಲ: ಗಾಯತ್ರಿಬಲ ಪಂಡಾ
- ಇಂಗ್ಲಿಷ್‌ಗೆ: ರಮಾಕಾಂತ ರಥ್
- ಕನ್ನಡಕ್ಕೆ: ಡಾ.ಎಚ್.ಎಸ್ ಅನುಪಮಾ
(ಗಾಯತ್ರಿಬಲ ಪಂಡಾ (೧೯೭೭) ಒರಿಯಾ ಕವಿ ಹಾಗೂ ಜರ್ನಲಿಸ್ಟ್. ಇದುವರೆಗೆ ಆರು ಕವನ ಸಂಗ್ರಹ ಪ್ರಕಟಿಸಿರುವ ಅವರು ೨೦೧೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದಿದ್ದಾರೆ. ಒಡಿಯಾ ಸಾಹಿತ್ಯಿಕ ತ್ರೈಮಾಸಿಕ ‘ಅನ್ಯಾ’ದ ಸಂಪಾದಕರು.)
No comments:
Post a Comment