Sunday, 4 August 2013


ಸರ್ಕಾರಿ ವೈದ್ಯರು, ಕೋರ್ಟು ಕಛೇರಿ ಇತ್ಯಾದಿ...

ಡಾ. ಜಿ.ಕೃಷ್ಣ



ಸರ್ಕಾರಿ ವೈದ್ಯರಿಗೆ, ಅದರಲ್ಲೂ ಜನರಲ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ  ವೈದ್ಯರಿಗೆ ಮೆಡಿಕೋ ಲೀಗಲ್ ಕರ್ತವ್ಯಕ್ಕೆ ಪೂರಕವಾಗಿ ಕೋರ್ಟಿನಲ್ಲಿ ಪ್ರಾಸಿಕ್ಯೂಶನ್ ಪರ ಸಾಕ್ಷಿಯಾಗಿ ಹೋಗುವುದು ಇದ್ದೇ ಇರುತ್ತದೆ.  ಹೊಡೆದಾಡಿಕೊಂಡು ಬರುವವರಿಗೆ, ವಾಹನ ಅಫಘಾತದಲ್ಲಿ ಗಾಯಗೊಂಡಿರುವವರಿಗೆ ಚಿಕಿತ್ಸೆಯ ಜೊತೆಗೆ ಮುಂದೆ ಕಾನೂನು ಕ್ರಮಕ್ಕೆ ಬೇಕಾಗುವ ಗಾಯದ ಪ್ರಮಾಣ ಪತ್ರ (Wound Certificate) ವನ್ನು ನೀಡುವುದು ಕೂಡ ಕರ್ತವ್ಯದಲ್ಲಿರುವ ಸರ್ಕಾರಿ ವೈದ್ಯರ ಜವಾಬ್ದಾರಿ. ಅನುಮಾನಾಸ್ಪದ ಎನಿಸುವಂತ ಗಾಯಾಳು ಬಂದಾಗ ಅದರ ಬಗ್ಗೆ ಪೋಲೀಸರಿಗೆ ಮಾಹಿತಿ ಕಳಿಸುವುದು ಕೂಡ ವೈದ್ಯರ ಕರ್ತವ್ಯ. ಪ್ರಮಾಣಪತ್ರ ಕೊಟ್ಟಮೇಲೆ ಕೋರ್ಟಿನಲ್ಲಿ ಕೇಸು ನಡೆಯುವಾಗ ಸಾಕ್ಷಿಯಾಗಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ.



ಇದೇನೂ ಬೇಸರದ ವಿಷಯವಲ್ಲ. ಆದರೆ ಹೊಡೆದಾಡಿಕೊಂಡು ಬರುವ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ತಪ್ಪು ಕಲ್ಪನೆಗಳಿರುವುದರಿಂದ ಪ್ರಮಾಣ ಪತ್ರ ನೀಡುವ ವೈದ್ಯ ಕೆಲವೊಮ್ಮೆ ಒತ್ತಡದಲ್ಲಿ ಸಿಕ್ಕಿಕೊಳ್ಳುತ್ತಾನೆ. ಗಾಯಗಳನ್ನು ಎರಡು ವಿಧದಲ್ಲಿ ಗುರುತಿಸಬೇಕಾಗುತ್ತದೆ-ಒಂದು ಸಾದಾ ಸ್ವರೂಪದ ಗಾಯ(Simple Injury), ಇನ್ನೊಂದು ತೀವ್ರ ಸ್ವರೂಪದ ಗಾಯ (grievous Injury). ಗಾಯದ ಪ್ರಮಾಣಪತ್ರದಲ್ಲಿ ವೈದ್ಯರು ಗಾಯ ಸಾದಾ ಸ್ವರೂಪದ್ದೋ ತೀವ್ರವಾದದ್ದೋ ಎಂಬ ಅಭಿಪ್ರಾಯವನ್ನು ಕೊಡಲೇಬೇಕು. ತರಚಿದ, ಹರಿದ, ಕುಯ್ದ ಗಾಯಗಳು ಸಾದಾ ಗಾಯಗಳು ಎಂದು ಪರಿಗಣಿಸಲ್ಪಡುತ್ತವೆ. ಎಲುಬು ಮುರಿತ, ಹಲ್ಲು ಮುರಿತ, ಬೆರಳು ಅಥವಾ ಕೈ ಕಾಲು ಕತ್ತರಿಸಲ್ಪಡುವುದು, ತಲೆ, ಎದೆ ಅಥವಾ ಹೊಟ್ಟೆಯ ಒಳಭಾಗಕ್ಕೆ ಜಖಂ ಇವೆಲ್ಲ ತೀವ್ರ ಸ್ವರೂಪದ ಗಾಯಗಳು. ಅಪರಾಧ ದಾಖಲಾಗುವಾಗ ಐ ಪಿ ಸಿ(Indian Penal Code)ಯ ಯಾವ ಸೆಕ್ಷನ್ ಹಾಕಬೇಕು ಎನ್ನುವುದನ್ನು ತನಿಖಾಧಿಕಾರಿಗಳು ಗಾಯದ ಸ್ವರೂಪದ ಮೇಲೆ ನಿರ್ಧರಿಸುತ್ತಾರೆ. ಅದರಂತೆ ಅಪರಾಧ ಸಾಬೀತಾದಾಗ ಶಿಕ್ಷೆಯ ಪ್ರಮಾಣವೂ ನಿರ್ಧಾರವಾಗುತ್ತದೆ, ಹೊಡೆದಾಡಿಕೊಂಡು ಬರುವ ಎಲ್ಲರಿಗೂ ತಮಗಾದ ಗಾಯ ತೀವ್ರ ಸ್ವರೂಪದ್ದು ಎಂದು ದಾಖಲಿಸುವ ಬಯಕೆ.  'ಇದು ಮೊದಲ ಸಲ ಅಲ್ಲ ಸರ್. ಅವನು ದೊಡ್ಡ ರೌಡಿಯೆ ಆಗಿಬಿಟ್ಟಿದ್ದಾನೆ. ಈ ಸಲ ಅವನನ್ನು ಹಾಗೇ ಬಿಡಬಾರದು. ನೀವು ಎಲ್ಲ ಸ್ವಲ್ಪ ಹೆಚ್ಚು ಬರೆದುಕೊಡಿ. ಕೇಸ್ ಗಟ್ಟಿಯಾಗುವಂತೆ ಮಾಡಿ' ಅಂತ ದುಂಬಾಲು ಬೀಳುವವರು, ಊರ ಮುಖಂಡರಿಂದ ಫೋನ್ ಮೂಲಕ ಒತ್ತಡ ಹೇರುವವರು, 'ನಾಕುದಿನ ಅಡ್ಮಿಟ್ ಮಾಡಿಕೊಳ್ಳಿ, ಕೇಸು ಬಿಗಿಯಾಗಬೇಕು' ಅಂತ ಒತ್ತಡ ಹೇರುವವರು, 'ನೀವು ಪಕ್ಷಪಾತ ಮಾಡುತ್ತಿದ್ದೀರಿ' ಅಂತ ವೈದ್ಯರ ಮೇಲೇ ಆರೋಪ ಹೊರಿಸುವವರು ಎಲ್ಲಾ ಸೇರಿ ಆಸ್ಪತ್ರೆಯಲ್ಲಿ ಒಂದು ಬಿಗುವಿನ ವಾತಾವರಣವೆ ಸೃಷ್ಟಿಯಾಗಿಬಿಡುತ್ತದೆ. ಇದಕ್ಕೆಲ್ಲ ಸಮಜಾಯಿಶಿ ನೀಡುವುದರಲ್ಲಿ ವೈದ್ಯ ಹೈರಾಣಾಗುತ್ತಾನೆ. ಈ ಮಧ್ಯೆ ಹೊಡೆದವನೂ ಪ್ರತಿದೂರು ಕೊಟ್ಟು ತನಗೂ ವಿಪರೀತ ಪೆಟ್ಟಾಗಿದೆ, ಹೊಡೆದದ್ದು ಅವನೇ ಹೊರತು ತಾನಲ್ಲ, ತನಗೂ ಯೋಗ್ಯವಾದ ಸರ್ಟಿಫಿಕೇಟ್ ಕೊಡಿ ಎನ್ನುತ್ತಾ ಬರುವುದೂ ಸಾಮಾನ್ಯ. ಇಬ್ಬರೂ ಒಟ್ಟಿಗೇ ಬಂದು ಆಸ್ಪತ್ರೆಯಲ್ಲಿ ಮತ್ತೆ ಹೊಡೆದಾಟಕ್ಕೆ ತಯಾರಾಗುವುದೂ ಉಂಟು.

ಹೊಡೆತ ತಿಂದ ಅವಮಾನ ಹೊಡೆದವನಿಗೆ ಶಿಕ್ಷೆಯಾಗಲೇ ಬೇಕು ಎಂಬ ರೋಷ, ಹಟಕ್ಕೆ ಕಾರಣವಾಗುವುದು ಸಹಜ. ಆದರೆ ಇವುಗಳಲ್ಲಿ ೯೯% ಪ್ರಕರಣಗಳು ಕೋರ್ಟಿನಲ್ಲಿ ಸಾಬೀತಾಗುವಂತವಲ್ಲ. ದೂರುಕೊಟ್ಟ ಒಂದೋ ಎರಡೋ ವರ್ಷಗಳ ನಂತರ ಕೇಸು ಕೋರ್ಟಿಗೆ ಬರುತ್ತದೆ (ಅಷ್ಟರಲ್ಲಿ ರಾಜಿಯಾಗದಿದ್ದರೆ). ಹೆಚ್ಚಿನ ಪ್ರತ್ಯಕ್ಷಸಾಕ್ಷಿಗಳು ತಿರುಗಿಬೀಳುತ್ತಾರೆ. ಪಿರ್ಯಾದಿದಾರನಿಗೂ ಕೋರ್ಟಿಗೆ ಅಲೆದು ಅಲೆದು ಸಾಕಾಗಿರುತ್ತದೆ. ಆಪಾದಿತ ಕೋರ್ಟಿಗೆ ಅಲೆದು, ವಕೀಲರ ಫೀಸ್ ಕೊಟ್ಟು ಕಂಗಾಲಾಗಿರುತ್ತಾನೆ. ಇಂತಹ ಹೊತ್ತಲ್ಲಿ ತಜ್ಞ ಸಾಕ್ಷಿ ವೈದ್ಯಾಧಿಕಾರಿ ಕಟಕಟೆಗೆ ಬರುತ್ತಾರೆ. ಅವರ ಕೋರ್ಟ್ ಸೀನ್ ಹೀಗಿರುತ್ತದೆ-

ಪ್ರಮಾಣ ವಚನ- ದೇವರ ಮೇಲೆ ಪ್ರಮಾಣ ಮಾಡಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲ ಸತ್ಯ.

ಮೊದಲು ಸರಕಾರಿ ವಕೀಲರ ಸವಾಲು. ಹೊಡೆದಾಟಕ್ಕೆ ಉಪಯೋಗಿಸಿದ ಕತ್ತಿ, ದೊಣ್ಣೆ, ಹಾರೆ, ಪಿಕಾಸುಗಳನ್ನೆಲ್ಲ ಹಾಜರುಪಡಿಸಿರುತ್ತಾರೆ. ವೈದ್ಯರು ಕೊಟ್ಟ ಪ್ರಮಾಣಪತ್ರದಲ್ಲಿರುವ ಗಾಯಗಳ ಬಗ್ಗೆ ಇನ್ನೊಮ್ಮೆ ವಿವರವಾಗಿ ಕೇಳುತ್ತಾರೆ. ಪಿರ್ಯಾದಿದಾರ ಆಸ್ಪತ್ರೆಗೆ ಬಂದ ದಿನಾಂಕ, ಸಮಯ, ಯಾರು ಕರೆತಂದಿದ್ದರು ಮುಂತಾದ ವಿವರಗಳನ್ನು ಕೋರ್ಟು ಇವರ ಮುಖಾಂತರ ಖಚಿತಪಡಿಸಿಕೊಳ್ಳುತ್ತದೆ. ಹತ್ಯಾರುಗಳನ್ನು ತೋರಿಸಿ ಅವುಗಳಿಂದ ಪ್ರಮಾಣಪತ್ರದಲ್ಲಿ ಹೇಳಲಾದ ಗಾಯಗಳು ಸಂಭವಿಸಬಹುದು ಎಂಬುದನ್ನೂ ಹೇಳಿಸುತ್ತಾರೆ
.
ಇನ್ನು ಪಾಟೀಸವಾಲು. ಆಪಾದಿತನ ಪರ ವಕೀಲರು ಬರುತ್ತಾರೆ.

"ನೋಡಿ ಡಾಕ್ಟ್ರೇ, ನೀವು ಹೇಳಿದ ಈ ತರಚು ಗಾಯ, ಹರಿದ ಗಾಯ, ಗುದ್ದು ಗಾಯ ಇವೆಲ್ಲಕ್ಕೂ ನೀವು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿದ್ದೀರಿ ಅಲ್ವಾ?"

"ಹೌದು"

"ಈ ಗಾಯಗಳು ಆಗ ತೋರಿಸಿದ ಹತ್ಯಾರುಗಳಿಂದ ಆಗಿವೆ ಅಂತ ನೀವು ಹೇಳ್ತೀರಿ ಅಲ್ವಾ?"

"ಹೌದು"

"ಡಾಕ್ಟ್ರೇ, ಒಬ್ಬ ವ್ಯಕ್ತಿ ಒರಟಾದ ನೆಲದ ಮೇಲೆ ಜಾರಿ ಬಿದ್ದರೆ, ಚೂಪಾದ ವಸ್ತುವಿನ ಮೇಲೆ ಬಿದ್ದರೆ ಇಂತಹ ಗಾಂiiಗಳು ಆಗಬಹುದಾ?"

"ಆಗಬಹುದು."

ಇಲ್ಲಿಗೆ ಈ ಪ್ರಕರಣದಲ್ಲಿ ಆರೋಪಿಯ ಖುಲಾಸೆ ಆಯ್ತು ಅಂತ ಅರ್ಥ. ಹೆಚ್ಚಿನ ಪ್ರಕರಣಗಳು ಇದೇ ದಾರಿಯಲ್ಲೇ ಸಾಗುತ್ತವೆ. ಈ ಹಂತದಲ್ಲಿ ಇಷ್ಟು ಸಣ್ಣ ಪ್ರಕರಣಗಳಲ್ಲಿ ಸರಕಾರಿ ವಕೀಲರೂ ಮತ್ತೆ ಪಾಟೀಸವಾಲಿಗೆ ಮುಂದಾಗುವುದಿಲ್ಲ. ಪೋಲೀಸರ ಬಳಿಯೂ ಗಟ್ಟಿಯಾದ ಬೇರೆ ಸಾಂದರ್ಭಿಕ ಸಾಕ್ಷಿಗಳು ಇರುವುದಿಲ್ಲ. ಜಿದ್ದಿರುವವರು ಮೇಲ್ಮನವಿಗೆ ಹೋಗಬಹುದು.

ಈ ರೀತಿಯ ಚಿಕ್ಕಪುಟ್ಟ ಪ್ರಕರಣಗಳು ನ್ಯಾಯದಾನ ವ್ಯವಸ್ಥೆಯ ಅಮೂಲ್ಯವಾದ ಸಮಯವನ್ನು ತಿಂದು ಹಾಕುತ್ತವೆ. ಇಡೀ ವ್ಯವಸ್ಥೆಯೇ ಬಸವನಹುಳುವಿನಂತೆ ತೆವಳುತ್ತದೆ. 'ಕೋರ್ಟು ಹತ್ತಿದರೆ ಈ ಜನ್ಮದಲ್ಲಿ ನ್ಯಾಯಸಿಗುವ ಸಾಧ್ಯತೆ ಕಡಿಮೆ' ಎನ್ನುವ ಮಾತು ನಿಜವಾಗುತ್ತದೆ.

ಸರಕಾರಿ ಸೇವೆಯಲ್ಲಿ ಈ ತರದ ಅಪರಾಧ ತಡೆ/ನ್ಯಾಯದಾನ ವ್ಯವಸ್ಥೆಯ ಜೊತೆಗಿನ ನಿರಂತರ ಮುಖಾಮುಖಿ, ಒತ್ತಡ ಎಷ್ಟೋ ವೈದ್ಯರು ಸರ್ಕಾರಿ ಸೇವೆಗೆ ಸೇರಲು ಹಿಂದೇಟು ಹಾಕಲು, ಸೇವೆಯಿಂದ ಹೊರಗೆ ಹೋಗಲು ಕಾರಣವಾಗುತ್ತಿದೆ ಎಂಬುದು ವಾಸ್ತವ. ತಮ್ಮ ತಜ್ಞತೆಗೆ ಹೊರತುಪಡಿಸಿದ ಈ ತರದ ಸೇವೆಯನ್ನು ಕೊಡಲು  ಹೆಚ್ಚಿನ ತಜ್ಞವೈದ್ಯರು ಬಯಸುವದಿಲ್ಲ.

ಕೋರ್ಟಿಗೆ ಕೇಸುಗಳ ಸಾಂದ್ರತೆ ಕಡಿಮೆ ಮಾಡಲು ಪ್ರಾಥಮಿಕ ಹಂತದಲ್ಲಿ ಜರಡಿಯಂಥ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವೆ ಎನ್ನುವುದರ ಕುರಿತು ಕಾನೂನು ತಜ್ಞರು ಚಿಂತಿಸಬೇಕು.

ಅರೋಗ್ಯ ಸೇವೆಯಲ್ಲೂ ಪ್ರತಿ ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ನ್ಯಾಯವೈದ್ಯ (Medico-legal) ವಿಭಾಗವನ್ನು ತೆರೆದು ಅದಕ್ಕೆ ನ್ಯಾಯವೈದ್ಯಶಾಸ್ತ್ರದಲ್ಲಿ ತಜ್ಞತೆ ಹೊಂದಿರುವ ಅಥವಾ ಅದರಲ್ಲಿ ತರಬೇತಿ ಪಡೆದ ವೈದ್ಯಾಧಿಕಾರಿಯನ್ನು ನೇಮಿಸಬೇಕು. ಆಗ ಮೆಡಿಕೋ ಲೀಗಲ್ ಕೇಸುಗಳಿಗೆ ಹೆದರಿ ಸರ್ಕಾರಿ ಸೇವೆಯಿಂದ ದೂರ ಸರಿಯುವ ವೈದ್ಯರನ್ನು ಹಿಡಿದಿಟ್ಟುಕೊಳ್ಳಬಹುದು.

No comments:

Post a Comment