Friday, 2 August 2013


ಕೂಲಿಯ ಕದಿಯುವ ಕುಲವೆಲ್ಲ.......     

Neela K Gulbarga


ನೀಲಾ. ಕೆ ಗುಲ್ಬರ್ಗಾ


ಬಲ್ಲಿದ ಹಗೆಯವ ತೆಗೆವನ್ನಬರ

ಬಡವರ ಹರಣ ಹಾರಿಹೋದ ತೆರನಂತಾಯಿತ್ತು.

-ಅಕ್ಕಮಹಾದೇವಿ



ಇಪ್ಪತ್ತು ವರ್ಷದ ಹಿಂದಿರಬೇಕು. ಸಾಕ್ಷರತೆಗಾಗಿ ಕೆಲಸ ಮಾಡುತ್ತಿದ್ದ ದಿನಗಳವು. ಜಿಲ್ಲಾ ಸಂಯೋಜಕರಿಗೆ ಗೌರವಧನ ರೂ.500 ಕೊಡುತ್ತಿದ್ದರು. ತಾಲ್ಲೂಕು ಸಂಯೋಜಕರಿಗೆ 300 ರೂಪಾಯಿ. ಹಳ್ಳಿಗಳಿಗೆ ಹೋಗುವುದು. ಅಕ್ಷರದ ಬೆಳಕು ಯಾಕಾಗಿ ಬೇಕೆಂದು ಮನನ ಮಾಡಿಸಿ ಜನರನ್ನು ಸಾಕ್ಷರತಾ ಕೇಂದ್ರಗಳಿಗೆ ಬರುವಂತೆ ಒಲಿಸುವುದು. ನನಗೆ ತುಂಬ ಖುಷಿ ಕೊಟ್ಟ ಕೆಲಸವದು. ಆದರೆ ಇತರರಿಗೆ ಈ ಕಡಿಮೆ ಗೌರವಧನ ಯಾತಕ್ಕೂ ಸಾಲುತ್ತಿರಲಿಲ್ಲ. ಜನರನ್ನು ಅಕ್ಷರದ ಅಂಗಳಕ್ಕೆ ತರುವ ನೇರ ಕೆಲಸ ಮಾಡುವವರಿಗೆ ತುಂಬಾ ಕಡಿಮೆ ಮೊತ್ತ ಖರ್ಚು ಮಾಡುವ ಸರ್ಕಾರವು, ಅದೇ ಹೊತ್ತಿನಲ್ಲಿ ಅನಾವಶ್ಯಕ ಅದ್ಧೂರಿ ಕಾರ್ಯಕ್ರಮಗಳಿಗೆ ವಿಪರೀತ ದುಂದುವೆಚ್ಚ ಮಾಡುತ್ತಿತ್ತು. ಗಾಬರಿಗೊಳಿಸುವಷ್ಟು ಲಂಚ, ಪೋಲು ಇದ್ದೇ ಇತ್ತು. ಕಾರ್ಯಕ್ರಮದ ಮುಖ್ಯ ಉದ್ಧೇಶ-ಗುರಿ ತಲುಪಲು ಅರ್ಥಪೂರ್ಣ ಖರ್ಚು ಮಾಡುವ ಇಚ್ಚೆಯೇ ಇಲ್ಲದ್ದು ಎಲ್ಲ ಹಂತಗಳಲ್ಲಿಯೂ ನೋಡಬಹುದು. ಅಂಥ ಸಂದರ್ಭದಲ್ಲಿ ಬೇರುಹಂತದಲ್ಲಿ ಕೆಲಸ ಮಾಡುವವರಿಗೆ ಫಲಾಪೇಕ್ಷೆಯಿಲ್ಲದೆ ಕಾಯಕ ಮಾಡಬೇಕೆಂದು ಉಪದೇಶ ಮಾಡುವುದರಿಂದ ಗುರಿ ಮುಟ್ಟಲು ಸಾಧ್ಯವೆ? ಆದ್ದರಿಂದಲೇ ಈಗಲೂ ನಮ್ಮ ಸಾಕ್ಷರತೆಯ ಪ್ರಮಾಣ ಶೇ.70ಕ್ಕೂ ತಲುಪಲಿಲ್ಲ. ಮಹಿಳಾ ಸಾಕ್ಷರತೆ ಅರ್ಧದಷ್ಟೂ ಮುಂದೆ ಹೋಗಲಿಲ್ಲ. ದಲಿತ ಸಾಕ್ಷರತೆ ಇನ್ನೂ ಕಡಿಮೆ ಇದೆ.

ಮಂಡಳ ಪಂಚಾಯತ್ ನೌಕರರಿಗೆ ವೇತನ ನಿಗದಿಗೊಳಿಸಬೇಕೆಂದು ಬೀದರ ಜಿಲ್ಲಾ ಪರಿಷತ್ತಿನ ಮುಂದೆ ತಿಂಗಳಗಟ್ಟಲೆ ಹೋರಾಟ ನಡೆಸಿದ ಮೇಲೆ ಮಾತುಕತೆಗೆ ಕರೆದಿದ್ದರು. ವೇತನದ ಪಟ್ಟಿ ಮಂಡಿಸಿದರು. ಕಸಗುಡಿಸುವವರಿಗೆ, ಚರಂಡಿ ತೆಗೆವವರಿಗೆ ಅತ್ಯಂತ ಕಡಿಮೆ ವೇತನ ನಿಗದಿಪಡಿಸಿದ್ದರು. ಯಾಕೆನ್ನುವುದಕ್ಕೆ ಅವರ ಸಮಜಾಯಿಶಿಯೆಂದರೆ, 'ದಿನದ ಒಂದೆರಡು ಗಂಟೆಯ ಕೆಲಸಕ್ಕೆ ಅದರಲ್ಲೂ ಕಸಗುಡಿಸುವುದಕ್ಕೆ ಹೆಚ್ಚು ವೇತನ ಯಾಕೆ?' ಎಂದು. ನನಗೆ ಸಿಟ್ಟು ಬಂದು 'ಸಾರ್ ಲಕ್ಷ ಕೊಟ್ಟರೂ ನಿಮ್ಮಂಥ ಅಧಿಕಾರಿಗಳು ರಸ್ತೆ ಕಸಗುಡಿಸಲಾಗುವುದಿಲ್ಲ. ರಸ್ತೆ,ಚರಂಡಿ ಶುಚಿಯಿಡುವವರಿಗೆ ಕಡಿಮೆ ವೇತನ ಸರಿಯೇನ್ರೀ?' ಮಾತುಗಳು ಅಲ್ಲಿ ಇರುಸು-ಮುರುಸು ಮಾಡಿದ್ದೇನೋ ಹೌದು. ಆದರೆ ತಳಹಂತದ ಕೆಲಸಗಳಿಗೆ ಕಡಿಮೆ ಕೂಲಿಯಲ್ಲಿ ಅಥವ ಬಿಟ್ಟಿಯಾಗಿ ದುಡಿಸಿಕೊಳ್ಳಬೇಕೆಂಬ ಮನೋಭೂಮಿಕೆ ಸರಿಯೇ? ಕೇವಲ ಐವತ್ತು ರೂಪಾಯಿಯಲ್ಲಿ ಗ್ರಾಮದ ಕಸಗುಡಿಸುತ್ತಿದ್ದ ಸಿದ್ದಮ್ಮಕ್ಕ, 'ಸಾಬ್ರೆ, ನಂಗನೂ ವಯಸ್ಸಾತು. ಹ್ಯಾಂಗನೂ ನಮ್ಮ ದುಡಮಿಗಿ ಕಿಮ್ಮತ್ತಿಲ್ಲ. ತಿಂಗಳಪೂರ್ತಿ ಕಸ ಹೊಡ್ಯಾದು ನಂಗನೂ ಆಗಲ್ಲ' ಅಂದಳು. ಸಿದ್ದಮ್ಮಕ್ಕ ಕೆಲಸ ಮಾಡಲಿಚ್ಛಿಸದವಳು ಅನ್ನಬಹುದು. ಕೂಲಿ ಕದಿಯುವುದು ಅಪರಾಧವೆನಿಸುವುದಿಲ್ಲ. ಆದರೆ ಹೆಚ್ಚು ಕೂಲಿ ಬೇಡಿದರೆ ಅಥವ ಕೂಲಿಗೆ ತಕ್ಕಷ್ಟು ಶ್ರಮಿಸುತ್ತೇವೆನ್ನುವುದು ಅಪರಾಧವಾಗುವುದು. ಇದು ನ್ಯಾಯವೇ?



ಇತ್ತೀಚೆಗೆ ಬಿಸಿಯೂಟದ ನಿರ್ವಹಣೆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ವಿಷಪೂರಿತ ಆಹಾರ ಸೇವಿಸಿ 21 ಮಕ್ಕಳು ಅಸುನೀಗಿದ ಮೇಲಂತೂ ಶಿಕ್ಷಕರು ಸಹ ಬಿಸಿಯೂಟದ ಯೋಜನೆಗೆ ವಿರೋಧಿಸುತ್ತಿರುವುದು ವರದಿಯಾಗುತ್ತಿವೆ. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಣಮಂತವಾಡಿ(ಎಂ) ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಕುಸುಮಳನ್ನು ಅರ್ಧ ಕೇಜಿ ಬೇಳೆ ಕಳ್ಳತನದ ಆರೋಪದಲ್ಲಿ ಗ್ರಾಮ ಪಂಚಾಯತಿಯವರು ಕಿತ್ತು ಹಾಕಿದರು. ಶಾಲೆಯ ಮುಖ್ಯೋಪಾಧ್ಯಾಯರು ಮುದ್ರೆ ಒತ್ತಿದರು. ವಿಧವೆ ಕುಸುಮ ತುಂಬ ಹೋರಾಡಿದಳು. ಊರ ರಾಜಕೀಯ ಸೇರಿಕೊಂಡು ಅವಳನ್ನು ಪುನಃ ಕೆಲಸಕ್ಕೆ ತಗೊಳ್ಳಲಿಲ್ಲ. ಅದೊಂದು ದಿನ ಕುಸುಮ ಸತ್ತ ಸುದ್ದಿ ಬಂತು. ಯಾವಾಗೆಂದರೆ ಆವಾಗ ಕೆಲಸದಿಂದ ಕಿತ್ತು ಹಾಕುವ ಪ್ರಕರಣಗಳಿಗೆ ಕೊರತೆಯೇನಿಲ್ಲ. ಏನೆಲ್ಲ ಅವಘಡಗಳಿಗೆ ಅವರನ್ನು ಗುರಿಯಾಗಿಸಲಾಗುತ್ತಿದೆ. ಶಿಕ್ಷಕರಿಗೂ ಈ ಯೋಜನೆ ತಲೆನೋವು ತಂದಿದೆ. ಅಕ್ಷರ ಕಲಿಸಬೇಕಾ? ಅನ್ನ ಕೊಡಬೇಕಾ? ನಮ್ಮ ಮಕ್ಕಳಿಗೆ ಅಕ್ಷರವೂ ಅನ್ನವೂ ಎರಡೂ ಬೇಕು. ಶಿಕ್ಷಕರಿಗೂ ಮತ್ತೊಂದು ಹೊರೆ ಹೊರೆಸುವಂತಿಲ್ಲ. ಮತ್ತು ಅತ್ಯಂತ ಕಡಿಮೆ ಕೂಲಿಯಲ್ಲಿ ದುಡಿಸಿಕೊಂಡು ಈ ಯೋಜನೆ ಸಾಫಲ್ಯಗೊಳಿಸಲೂ ಆಗುವುದಿಲ್ಲ. ಆರಂಭದಲ್ಲಿ ಅಡುಗೆಯವಳಿಗೆ ತಿಂಗಳಿಗೆ ರೂ.300, ಮುಖ್ಯಅಡುಗೆಯವಳಿಗೆ ರೂ.400 ಕೊಡುತ್ತಿದ್ದರು. ಈಗ ಕ್ರಮವಾಗಿ ರೂ.1100, ರೂ.1000 ಗೌರವಧನವಿದೆ. ತಿಂಗಳುಪೂರ್ತಿ ಕಡಿಮೆ ಕೂಲಿಯಲ್ಲಿ ದುಡಿಯುವುದು ಸಾಧ್ಯವೇ? ಇವರನ್ನು ಖಾಯಂಗೊಳಿಸಿ ಸುಸಜ್ಜಿತ ಅಡುಗೆಕೋಣೆ, ಮುಂತಾದ ಸೌಲಭ್ಯ ಕೊಡಬಹುದಲ್ಲವೇ? 

ದೇಶದ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಆರಂಭಗೊಂಡ ಮಕ್ಕಳಾಭಿವೃದ್ಧಿ ಯೋಜನೆ(ಐಸಿಡಿಎಸ್)ಯಲ್ಲಿ ದುಡಿಯುವ ಅಂಗನವಾಡಿ ಶಿಕ್ಷಕಿಯರಿಗೆ ಆರಂಭದಲ್ಲಿ ರೂ.175 ಮತ್ತು ಸಹಾಯಕಿಯರಿಗೆ ಕೇವಲ ರೂ.50 ತಿಂಗಳಿಗೆ ಗೌರವಧನ ಕೊಡುತ್ತಿದ್ದರು. ಬಹಳಷ್ಟು ವರ್ಷ ಇಷ್ಟೆ ಕಡಿಮೆ ಕೂಲಿಯಲ್ಲಿ ದುಡಿದರು. ಈಗ ಅದರಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಆಹಾರದಿಂದಲೂ ಅಕ್ಷರದಿಂದಲೂ ವಂಚಿತವಾದವರಿಗಾಗಿ ಹುಟ್ಟಿಕೊಂಡ ಯೋಜನೆಗಳನ್ನು ತಲಸ್ಪರ್ಶಿಯಾಗಿ ಜಾರಿ ಮಾಡುವಲ್ಲಿ ಗಂಭೀರವಾದ ದೋಷವಿದೆ. ಮೇಲ್ಮಟ್ಟದ ಕಡತಗಳ ನಿರ್ವಹಣೆ ಒಂದು ಭಾಗ. ಆದರೆ ತಳಹಂತದಲ್ಲಿ ನೇರವಾಗಿ ಜನತೆಗೆ ತಲುಪಿಸುವವರಿಗೆ ಅತ್ಯಂತ ಕಡಿಮೆ ವೇತನ\ಕೂಲಿ ನಿಗದಿಸುವುದು ಸರಿಯೇ? ಕರ್ನಾಟಕದಲ್ಲಿ 54260 ಅಂಗನವಾಡಿ ಕೇಂದ್ರಗಳಿವೆ. (ಎಲ್ಲಕ್ಕೂ ಕಟ್ಟಡಗಳಿಲ್ಲ) 33 ಲಕ್ಷಕ್ಕೂ ಹೆಚ್ಚು ಮಕ್ಕಳು ಇದರಲ್ಲಿರುವರು. ಹಿಂದೆ ಕ್ರಿಸ್ಟ್ ಸಂಸ್ಥೆಯಿಂದ ಭಾರಿ ಅವ್ಯವಹಾರ ನಡೆದು ಈಗ ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಹೆಸರಿನಲ್ಲಿರುವ ಕಮಿಟಿಗಳ ಮೂಲಕ ಆಹಾರ ತಯಾರಿಕೆ ನಿರ್ವಹಿಸುತ್ತಿರುವರು. ಆರಂಭದಿಂದಲೂ ಪೌಷ್ಠಿಕ ಆಹಾರ ತಯಾರಿಕೆ-ಪೂರೈಕೆ ಖಾಸಗಿಯವರಿಗೆ ಕೊಡಲಾಗಿದೆ. ಮಿಡೇಮೀಲ್ಸನ್ನು ಅದಮ್ಯ ಚೇತನ, ಇಸ್ಕಾನ್ದಂಥ ಸಂಸ್ಥೆಗಳು ನಿರ್ವಹಿಸುತ್ತಿವೆ. ಇವುಗಳು ಸರಕಾರದಿಂದ ಕೋಟಿಗಟ್ಟಲೇ ಲೂಟಿ ಮಾಡಿ ಲಾಭದಲ್ಲಿದ್ದ ಮೇಲೆಯೂ ಮಕ್ಕಳ ಅಪೌಷ್ಠಿಕತೆ ನಿಲ್ಲಲಿಲ್ಲ. ಬದಲಿಗೆ ಹೆಚ್ಚಾಗಿದೆ. 2011ರಲ್ಲಿ ರಾಯಚೂರೊಂದರಲ್ಲಿಯೇ 2,689 ಮಕ್ಕಳು ಅಪೌಷ್ಠಿಕತೆಯಿಂದ ಅಸುನೀಗಿವೆ. 2-3 ಮಕ್ಕಳು ಪ್ರತಿದಿನ ಸಾಯುತ್ತಿವೆ. ಸ್ಟೇಟ್ ಎಕಾನಾಮಿಕ್ ಸರ್ವೆ ಪ್ರಕಾರ 63% ಗರ್ಭಿಣಿಯರು ಅನೆಮಿಕ್. ಇದಕ್ಕೆ ಅಂಗನವಾಡಿ ಟೀಚರನ್ನು ಹೊಣೆ ಮಾಡಲು ಹೇಗೆ ಸಾಧ್ಯ?



ಅಂತೆಯೇ ನ್ಯಾಷನಲ್ ಹೆಲ್ತ್ ಮಿಷನ್ನವರು ಎಲ್ಲರಿಗೂ ಆರೋಗ್ಯದ ಹಿನ್ನೆಲೆಯಲ್ಲಿ ಸಾವಿರ ಜನಸಂಖ್ಯೆಯ ವ್ಯಾಪ್ತಿಯಲ್ಲಿ ಒಬ್ಬ 'ಆಶಾ'ಳನ್ನು ನೇಮಿಸಿರುವರು. ಅವಳಿಗೆ ಕೊಡುವ ಕೂಲಿ ಪೀಸ್ ವರ್ಕ್ ತರ.  ಒಂದು ಕೇಸಿಗೆ ರೂ.200. ತಿಂಗಳಲ್ಲಿ ಎಷ್ಟು ಬಸುರಿ-ಬಾಣಂತಿ ಕೇಸಿರಬಹುದು? ತಿಂಗಳಿಗೆ ರೂ.500 ಸಹ ಪಡೆಯದವರಿರುವರು. ಇನ್ನು 108 ಅಂಬ್ಯೂಲೆನ್ಸ್-ಚಾಲಕ ನಿರ್ವಾಹಕರು ಸಹ ಕಡಿಮೆ ಹಣದಲ್ಲಿ ದುಡಿಯುತ್ತಿದ್ದು, ಸಾಲದೆಂದು ಈಗ ಹೋರಾಟಕ್ಕಿಳಿದಿರುವರು. ಸರಕಾರದ ಇಂಥ ಕ್ರಮದಿಂದ ಎಲ್ಲರಿಗೂ ಆರೋಗ್ಯ ದೊರೆಯಲು ಸಾಧ್ಯವೇ? ಇದೆ ರೀತಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಹಣೆಬರಹ. ನೆಲಜಲದ ರಕ್ಷಣೆಯೊಂದಿಗೆ ದುಡಿಯುವ ಜನರ ಕೈಗೆ ಕೆಲಸ ಕೊಡುವ ಯೋಜನೆ ನಿರ್ವಹಿಸಲು ಪ್ರತ್ಯೇಕ ಸಿಬ್ಬಂದಿ, ಸಂಪನ್ಮೂಲಗಳ ಜರೂರಿಯಿದೆ. ಆದರೆ ಪ್ರಭುತ್ವಕ್ಕಿದು ಬೇಕಿಲ್ಲ. 

ಆಹಾರ, ಆರೋಗ್ಯ, ಉದ್ಯೋಗ, ಶಿಕ್ಷಣದಂಥ ಜನಾವಶ್ಯಕ ಯೋಜನೆಗಳನ್ನು ರೂಪಿಸಿ ಜನಪ್ರಿಯ ಘೋಷಣೆಗಳನ್ನು ಕೊಡುವ ಸರಕಾರಕ್ಕೆ ಇವುಗಳನ್ನು ಜಾರಿಗೊಳಿಸುವ ಹಂತದಲ್ಲಿ ಸಂಪೂರ್ಣ ವಿರುದ್ಧ ನಿಲುವಿರುತ್ತದೆ. ಆದ್ದರಿಂದಲೇ ಸುಪರ್ವೈಜ್ಗಾಗಿ ಹೆಚ್ಚು ಹಣ ವ್ಯಯಿಸುವುದರೊಂದಿಗೆ ಖಾಸಗಿಯವರಿಗೆ ಲಾಭ ಮಾಡಿಕೊಡುವ ಇಚ್ಛೆಯಿರುವುದು ಸ್ಪಷ್ಟ. ಇದೇ ಸಮಯದಲ್ಲಿ ಯೋಜನೆ ಜಾರಿಗೊಳಿಸುವ ಆಶಾ, ಅಂಗನವಾಡಿ ಅಕ್ಕಂದಿರು, ಬಿಸಿಯೂಟದ ಅನ್ನಪೂರ್ಣೆಯರು ಮತ್ತಿತರರನ್ನು ಕಡಿಮೆ ಕೂಲಿಯಲ್ಲಿ ದುಡಿಸಿಕೊಳ್ಳುವುದೆಂದರೆ ಏನರ್ಥ? ಜನಪ್ರಿಯ ಯೋಜನೆಯಿಂದ ಕುರ್ಚಿಯಂತು ಭದ್ರ. ಆದರೆ ಬಡಜನತೆ ಮಾತ್ರ ನಿರಂತರ ಸಂಕಟದಲ್ಲಿ ಬೇಯುವುದು ತಪ್ಪುವುದಿಲ್ಲ. 'ಸಾವ್ಕಾರ್ರು ಸಿರಿವಂತ್ರು ಪಟ್ಟಗಟ್ಟಿ ಆಳುವವರು ಕೂಲಿಯ ಕದಿಯುವ ಕುಲವೆಲ್ಲ'...ಹಾಡು ಹೃದಯದಲ್ಲಿ ಹಲಿಗೆ ಬಡಿಯುತ್ತಿದೆ....

ಚಿತ್ರ: ಯಮುನಾ ಗಾಂವ್ಕರ್
***

1 comment:

  1. ಲೇಖನಕ್ಕೆ ಧನ್ಯವಾದಗಳು. ಈಗ ಇನ್ನೊಂದು ಅಪಾಯ. ಐಸಿಡಿಎಸ್ ಮಿಶನ್ ಮೋಡ್ ಅಂತ ತರುತ್ತಿದ್ದಾರೆ. ಅಪೌಷ್ಠಿಕತೆ ರಾಷ್ಟ್ರೀಯ ಅಪಮಾನ ಎಂದು ತಡವಾಗಿ ಒಪ್ಪಿಕೊಂಡ ಪ್ರಧಾನ ಮಂತ್ರಿಗಳು ಪ್ರತಿ ವರ್ಷ 5 ಪ್ರೊಜೆಕ್ಟನಂತೆ ಖಾಸಗಿಗೆ ವಹಿಸಲು, ಸರ್ಕಾರ ಕೇವಲ 15% ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಮುಂದಾಗ್ತದಂತೆ. ಆಹಾರ ಪೂರೈಕೆ, ನಿರ್ವಹಣೆ, ಉಸ್ತುವಾರಿ ಎಲ್ಲ ಖಾಸಗಿಗೆ. . .

    ReplyDelete