Monday 26 August 2013

ಕಾಲವೆಂದರೆ...

ಪ್ರವರ ಕೊಟ್ಟೂರ್

Pravara Kottur


ಕಾಲವೆಂದರೆ
ಮರದ ಪೊಟರೆಗಳಲ್ಲಿ
ತುಂಬಿದ ಕೆಂಪು ಮಣ್ಣು
ಹಾರಲಾರದ ಹಕ್ಕಿ
ಊಳಿಡಲಾಗದ ಸೀಳು ನಾಯಿ
ಹಸಿರ ಕಾಯಲಾರದ ತಂತಿಬೇಲಿ.

ಕಾಲವೆಂದರೆ ನನಗೆ
ಕಾಲಿಗೆ ಚುಚ್ಚಿದ ಜಾಲಿ ಮುಳ್ಳು
ನೆತ್ತಿಯಲೇ ಉರಿವ ಆಕಾಶ
ಸುಳ್ಳು ಹೇಳುವ ಗಾಂಧಿ, ಗುಂಡು ಹಾರಿಸದ ಪಿಸ್ತೂಲು
ತುಕ್ಕು ಹಿಡಿದು ಮೊಂಡಾದ ತಲ್ವಾರ್
ಗುಂಡಿಗೆ ಕಳೆದುಕೊಂಡ ಅರ್ಧ ಮೀಸೆಯ ಹಿಟ್ಲರ್
ಸೋತು ಬಿಡುವ ಉಸಿರು....

ಅಮೇರಿಕಾದ ಬೂಟುಗಾಲುಗಳ ಮೇಲೆ
ಬಿದ್ದ ಜೊಲ್ಲು
ಬೊಗಸೆಯಲ್ಲಿ ಬಿಳಿಯರು ಬಿಸಾಡಿದ
ಚಿಲ್ಲರೆ ಕಾಸು
ರಕ್ಕಸ ಕುಣಿತದ ಬಾಂಬು
ಅಂಗೈ ಕಾಣದಷ್ಟು ಹೊಗೆ.

ಕಾಲವೆಂದರೆ?
ಕುರಿಯ ದ್ವನಿಯಲ್ಲಿ ಬಡ ಬಡಿಸುತ್ತೇನೆ
ಕೆರೆದುಕೊಂಡಾಗ ಮಣ್ಣು ತುಂಬಿದ ಉಗುರು,
ದೇಶರ ಹೆಸರೇನು?
ಇಂಡಿಯಾ!! ಎಂದು ಬೊಬ್ಬಿಟ್ಟಿತು ಮಗು.

ಕಾಲವೆಂದರೆ ನಮ್ಮ ತನದ ಸಾವು
ಅಂಗಾತ ಮಲಗಿದ ಬೆಳಕು!

***

No comments:

Post a Comment