Saturday, 17 August 2013

ಒಡಕು

ಗಂಗಾಧರ ಚಿತ್ತಾಲ

ಗಂಗಾಧರ ಚಿತ್ತಾಲ

ಜಗಜ್ಜಾಹೀರವಾಗಿ ಸುದ್ದಿ ಬಂದಿತ್ತು
ದಪ್ಪಕ್ಷರದ ಸುದ್ದಿ:
ಯಾವದೋ ಉಸುಬಿನ ಅರಣ್ಯಕ್ಕೆ 
ಅಣುವನ್ನೊಯ್ದು ಜಜ್ಜಿ ಒಡೆದರಂತೆ
ಮೈಲಿದೂರ ಮೈ ಕದ್ದುನಿಂತವರು ನೋಡಿದರಂತೆ.

ಮೊದಲು ಜಿಗಿದದ್ದು ಭುಗಿಲೆದ್ದ ಜ್ವಾಲೆಯ ಗೋಲ
ನೂರು ಸೂರ್ಯರ ಜರೆವ ವಿಸ್ಫುಲಿಂಗ
ಆಮೇಲೆ ಆಕಾಶ ಮುತ್ತಿ ಹೆದೆಬಿಚ್ಚಿದ
ಭಯಾಕಾರ ರೇಣು ಭಸ್ಮದ ಅಣಬೆ
ಆಮೇಲೆ ತೆರೆ ಮೇಲೆ ತೆರೆ ಬಡಿದು
ಸಿಡಿಮಿಡಿದ ನೆಲದದುರು
ಕೊನೆಗೊಮ್ಮೆ ಗರ್ಜನೆಯೊ ಚೀತ್ಕಾರವೋ
ವಿಕಾರ ಕೂಗೊ, ತಿಳಿಯದ ದೇಹ ಜೀವ ಭೇದಕ ನಾದ.

















ಇನ್ನೂ ಏನೇನೋ ಗಳಹಿತ್ತು ಸುದ್ದಿ:
ಈ ಯಶಸ್ವೀ ಒಡಕಿನಿಂದ ಹೊರಬಿದ್ದ ಬಲವೆಷ್ಟು,
ಒಳಸುರಿದ ಶ್ರಮವೆಷ್ಟು, ಖರ್ಚೆಷ್ಟು,
ಈ ಮಹತ್ಸಾಧನೆಯ ಮಂತ್ರಬೋಧಕನಾರು, ತಂತ್ರ
ಶೋಧಕನಾರು, ಏನವರ ವರ್ಚಸ್ಸು.

ಈ ಐತಿಹಾಸಿಕದ ಸಾಧಕದ ಬಾಧಕದ ಒಂದಿಷ್ಟು ತಪಶೀಲು
ಮಾನವನ ನಡೆಯಲ್ಲಿ ಇದು ಎಷ್ಟನೆ ಮೈಲಿಗಲ್ಲು
ಮುಂದಿನ ಕಲ್ಲು
ಬೀಳುವ ಸರಾಸರಿಯ ತಾರೀಖಿನಂದಾಜು
ಬರುವ ನಾಳೆಗಳಲ್ಲಿ ಏನೆಲ್ಲ ಕಾದಿದೆಯೊ ಅದರ ಜಾತಕ ಗಣಿತ
ಒಡಕಿನ ಪರಂಪರೆಯ ಚಾಚೂ ಬಿಡದ ಭಣಿತ
ಅಂಕಿಸಂಖ್ಯೆಯ ಸಕಲ ವಿವರಸಹಿತ.

ಓದೋದುತಿರುವಾಗ ನನಗೇತಕೋ ನಡುಕ.
ಇದು ಒಳಿತಿಗಲ್ಲ, ನೆಲಗಟ್ಟನೇ ಜಡಿದೊಡೆದು
ಅಡಿಗಲ್ಲಿನೊಳಗುಟ್ಟಿನೊಳಕು ಬೆದಕುವ ಚಾಳಿ
ಕೆದಕಿ ಅರಸುವ ಖಜ್ಜಿ ತುರಿಕೆ ಕಳೆವುದರಲ್ಲಿ
ಕುರುಡುಕೈಗಳು ದುಡುಕಿ-ನಿಯತಿಯುರಕೂ ದಾಳಿ
ಈ ಜ್ವಾಲೆ, ಈ ಭಸ್ಮ, ಈ ಕೂಗು, ಈ ಕಂಪ
ವಿದ್ರೋಹಕುರಿದೆದ್ದ ವಿಲಯರುದ್ರರ ಹೂಲಿ.

***

No comments:

Post a Comment