Thursday 11 July 2013


ರಾಜೇಂದ್ರ ಬಿ ಶೆಟ್ಟಿಯವರ ಕೆಲವು ಬಿಡಿನೆನಪುಗಳು



1.
ಇದು ಇಂದು ನಡೆದ ಸತ್ಯ ಘಟನೆ. ಕಾರಿನ ಮುಂದಿನ ಸೀಟಿನಲ್ಲಿ ಎಡ ಬದಿಗೆ ಕುಳಿತ್ತಿದ್ದೆ. ರಸ್ತೆಯಲ್ಲಿ ಹೆಚ್ಚು ಜನರಿರಲಿಲ್ಲ. ರಸ್ತೆ ಅಗಲವಿತ್ತು. ಕಾರು ಸುಮಾರು ೮೦+ ಕಿಲೋಮೀಟರ್ / ಘಂಟೆಗೆ ವೇಗದಲ್ಲಿ ಹೋಗುತಿತ್ತು. ಒಂದು ತಿರುವು. 

ತಿರುವಿನ ನಂತರ ಒಂದು ಹೆಂಗಸು ನೆಲದಲ್ಲಿ ಕಾಲು ಅಗಲವಿರಿಸಿ ಕುಳಿತಿದ್ದಾಳೆ ಯಾ ಬಿದ್ದಿದ್ದಾಳೆ. ಆಕೆಯ ಗಂಡ, ಖಾಕಿ ಚಡ್ದಿ, ಮಾಸಿ ಬಿಳಿ ಅಂಗಿ, ಮಧ್ಯ ವಯಸ್ಸು, ಆಕೆಯ ಎರಡೂ ಕಂಕುಳ ಮಧ್ಯ ಕೈ ಹಾಕಿ ಆಕೆಯನ್ನು ಎತ್ತಲು ಪ್ರಯತ್ನಿಸುತ್ತಿದ್ದಾನೆ. ಸ್ವಲ್ಪ ಮುಂದೆ ಸಣ್ಣ ಹುಡುಗಿ (ಮಗು) ತನ್ನ ಅಜ್ಜ ಅಜ್ಜಿಯರನ್ನು ನೋಡುತ್ತಿದೆ. ಕಾರು ಮುಂದೆ ಹೋಯಿತು. ಒಂದು ಕ್ಷಣದಲ್ಲಿ ಕಂಡ ದೃಶ್ಯವನ್ನು ಕಣ್ಣು ಮತ್ತು ಬುದ್ಧಿ ಕ್ಷಣಕ್ಕೆ ದಾಖಲಿಸಿದ್ದು ಇಷ್ಟು.

ಮನಸ್ಸು ಮಾತ್ರ ವಿಚಾರ ಮಾಡುತ್ತಿತ್ತುಆಕೆಗೆ ಮೈ ಚೆನ್ನಾಗಿಲ್ಲವೆ? ಯಾ ಬೆಳಿಗ್ಗೆನೇ ಸರಾಯಿ ಕುಡಿದು ಬಿದ್ದಿರಬಹುದೆ. ಪಾಪ ಗಂಡ ಆಕೆಯನ್ನು ಎತ್ತಲು ಶತ ಪ್ರಯತ್ನ ಮಾಡುತ್ತಿದ್ದಾನೆ. ನಾನು ಕಾರು ನಿಲ್ಲಿಸ ಬಹುದಿತ್ತು. ಅವರಿಗೆ ಸಹಾಯ ಮಾಡಬಹುದಿತ್ತು. ಕೊನೆಯ ಪಕ್ಷ ಕುಡಿಯಲು ನೀರು ಕೊಡಬಹುದಿತ್ತು. ಸ್ವಲ್ಪ ಶ್ರೀಮಂತರಾಗಿದ್ದು, ಒಳ್ಳೆಯ ಬಟ್ಟೆ ಹಾಕಿರುತ್ತಿದ್ದರೆ ಕಾರು ನಿಲ್ಲಿಸುತ್ತಿದ್ದೆನೋ ಏನೋ. ಪ್ರಾಯಶಃ ಅವರು ಕೂಲಿ ಮಾಡುವವರಾದುದರಿಂದ ನಾನು ಕಾರು ನಿಲ್ಲಿಸಲಿಲ್ಲ. 

ಯಾಕೋ ಮುದಿ ಮನುಷ್ಯ ನನ್ನನ್ನು ತುಂಬಾ ಹೊತ್ತು ಕಾಡಿದ. ಒಮ್ಮೆ ಕಾರು ಹಿಂದೆ ತಿರುಗಿಸುವ ಅನಿಸಿದರೂ ರೀತಿ ಮಾಡಲಿಲ್ಲ. ಸಾಯಂಕಾಲ ಬಗ್ಗೆ ಯೋಚಿಸುವಾಗ, ನಾನು ಬರೆವ ಮಾತನಾಡುವ ಆದರ್ಶ ಒಂದು ಡೋಂಗಿ ಅನಿಸಿತು. ಪ್ರಾಯಶಹ ಘಟನೆ ನಾನು ಜೀವನದ ಕೊನೆಯ ವರೆಗೆ ಮರೆಯಲಾರೆ. ನನ್ನ ವರ್ತನೆಗೆ ಕ್ಷಮೆ ಇಲ್ಲ.


2.

ಘಟನೆ ನಡೆದಾಗ ನಾನು ಒಂದನೆಯ ಯಾ ಎರಡನೆಯ ಕ್ಲಾಸಿನಲ್ಲಿ ಇದ್ದೆ. ಯಾವುದೋ ಮದುವೆಗೆ ಬೇರೆ ಊರಿಗೆ 

ಹೋಗಿದ್ದೆ. ಅಲ್ಲಿದ್ದ ಮನೆಯ ಮಕ್ಕಳೊಂದಿಗೆ (ಅತ್ತೆಯ ಮಕ್ಕಳು), ಅವರ ಶಾಲೆಗೆ ಹೋದೆ. ಯಾವುದೋ ತರಗತಿಯಲ್ಲಿ 

ನನ್ನನ್ನು ಕುಳ್ಳಿರಿಸಿದರು.




ಇನ್ನೂ ನೆನಪಿದೆಆವಾಗ ನಾನು ಮೂರು ಕಾಲದ ಬಗ್ಗೆ ಕಲಿತದ್ದುಮಳೆಗಾಲ, ಚಳಿಗಾಲ ಮತ್ತು ಬೇಸಿಗೆಕಾಲ. ಟೀಚರ್ 

ಕಲಿಸಿದ್ದು ಹೀಗೆಃಒಂದು ತಾಯಿಗೆ ಮೂರು ಮಕ್ಕಳು. ಆಕೆ ಒಂದು ದೋಸೆ ಮಾಡುತ್ತಾಳೆ. ಅದನ್ನು ಆಕೆ ಎಷ್ಟು ಭಾಗ 

ಮಾಡುತ್ತಾಳೆ? “




ಎಲ್ಲಾ ಮಕ್ಕಳು ಮೂರು ಅಂದರೆ, ನಾನು ನಾಲ್ಕೆಂದಿದ್ದೆ. ಟೀಚರ್ ನನ್ನನ್ನು ಸುಮ್ಮನೆ ಇರಲು ಹೇಳಿದ್ದರು. ನಾನೆಂದೆ, “ 

ಮೂರು ಭಾಗ ಮಕ್ಕಳಿಗೆ, ಒಂದು ಭಾಗ ತಾಯಿಗೆ.”




ಮಕ್ಕಳ ಮನಸ್ಸು ಎಷ್ಟು ವಿಶಾಲ!
Top of Form


3.
ಇದು ಬಹಳ ವರ್ಷಗಳ ಹಿಂದೆ, ಎಲ್ಲೋ ಓದಿದ ಕಥೆ. ಇದರ ಬಗೆಗೆ ಹೆಚ್ಚಿನ ಮಾಹಿತಿ ನೀಡಲು ಅಸಮರ್ಥನಾಗಿದ್ದೇನೆ. ನೆನಪಿನ

ಆಧಾರಿಂದ, ನನ್ನ ಕಲ್ಪನೆಯನ್ನು ಸೇರಿಸಿ, ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

( ಕಥೆ ನೆನಪಾಗಲು ಕಾರಣ ನಿಮಗೂ ಗೊತ್ತಾಗ ಬಹುದು.)




ಅದೊಂದು ಗುಡ್ಡಗಾಡು ಪ್ರದೇಶ. ಅಲ್ಲಿ ಯಾವುದೇ ಮನೆಯಲ್ಲಿ ಯಾರಾದರೂ ಸತ್ತರೆ, ಊರ ಜನರು ಸರದಿಯಂತೆ

ಹದಿಮೂರು ದಿನ, ಮನೆಗೆ ಊಟ ನೀಡುವುದು ಅಲ್ಲಿನ ಪದ್ಧತಿ.



ಅದೊಂದು ಬಡ ಕುಟುಂಬ. ಗಂಡ, ಹೆಂಡತಿ ಮತ್ತು ಮೂರು ಸಣ್ಣ ಮಕ್ಕಳು. ಹೊಟ್ಟೆಗೆ ಸರಿಯಾಗಿ ಹಿಟ್ಟಿಲ್ಲ. ಅನೇಕ ದಿನ 

ಏಕಾದಶಿ. ಯಾವುದೋ ರೋಗಕ್ಕೆ ತುತ್ತಾಗಿ ಅವರ ಕೊನೆಯ ಮಗು ಸಾಯುತ್ತದೆ. ಅವರ ಪದ್ಧತಿಯಂತೆ, ದಿನ ದಿನವೂ 

ಅವರಿಗೆ ಪುಕ್ಕಟೆ ಊಟ ಸಿಗುತ್ತದೆ. ಹತ್ತು ಹನ್ನೊಂದು ದಿನ ಕಳೆಯುತ್ತದೆ. ಅವರ ಎರಡನೆಯ ಮಗುವಿಗೂ ಅದೇ ರೋಗದ 

ಲಕ್ಷಣ ಕಾಣಿಸುತ್ತದೆ. ಮಗು ಹಾಸಿಗೆ ಹಿಡಿಯುತ್ತದೆ.




ಮೊದಲ ಮಗು ತನ್ನ ತಾಯಿಯನ್ನು ಕೇಳುತ್ತದೆ, “ ಅಮ್ಮಾ, ಇವನೂ ಸತ್ತರೆ, ನಮಗೆ ದಿನ ದಿನವೂ ಊಟ ಸಿಗುವುದಲ್ಲವೆ?”
Top of Form


4.



ಕ್ರಿಸ್ಮಸ್ ಅಥವಾ ಹೊಸ ವರುಷದ ಹಿಂದಿನ ದಿನ. ೨೦೦೭ ಯಾ ೦೮ ಇರಬಹುದು. ಮಗಳು ಮತ್ತು ಹೆಂಡತಿಯೊಂದಿಗೆ 
ಸೆಂಟ್ರಲ್ ಮಾಲ್ ಗೆ ಹೋಗಿದ್ದೆ. ಅವರಿಬ್ಬರ ಜೊತೆಗೆ ತಿರುಗಿ ನನಗೆ ಸಾಕಾಯಿತು. ಕೆಳಗೆ, ಮಾಲಿನ ಹೊರಗೆ ಬಂದೆ.


ಅಲ್ಲಿ ಮೆಕ್ ಡೊನಾಲ್ಡ್ಸ್ ಅಂಗಡಿ ಇದೆ. ಅಲ್ಲಿ ಒಂದು ಗಂಡಸಿನ ಗೊಂಬೆ ಇದೆ. ಸ್ವಲ್ಪ ಕಾರ್ಟೂನ್ ತರಹ ಇದೆ
ಹಲವಾರು ಜನ ಅದರ ಬಳಿ ಕುಳಿತೋ, ತಮ್ಮ ಮಕ್ಕಳನ್ನು ಕುಳ್ಳಿರಿಸಿಯೋ ಫೋಟೋ ತೆಗೆಯುತ್ತಿದ್ದರು.

ಸ್ವಲ್ಪ ನಂತರ, ಅಲ್ಲಿಗೆ ಒಂದು ಚಿಂದಿ ಬಟ್ಟೆ ಧರಿಸಿದ, ಸರಿಯಾಗಿ ತಲೆ ಬಾಚದ ಚಿಕ್ಕ ಹುಡುಗಿ ಬಂತು. ಕಂಕುಳಲ್ಲಿ ಒಂದು 
ಮಗು. ಹತ್ತಿರದ ಸ್ಲಂನಿಂದ ಬಂದಿರ ಬಹುದು. ಗೊಂಬೆಯ ಬಳಿ ಮಗುವನ್ನು ಕುಳ್ಳಿರಿಸಿ, ವಿವಿಧ ಭಂಗಿಗಳಲ್ಲಿ ತನ್ನ 
ಕೈಯನ್ನೇ ಕೆಮರಾವಾಗಿಸಿ ಮಗುವಿನ ಚಿತ್ರ ತೆಗೆಯುತ್ತಿದ್ದಳು. ಮಗು ನಗುತ್ತಿತ್ತು. ಘಟನೆಯನ್ನು ಚಿತ್ರೀಕರಿಸಲು 
ಕೈಯಲ್ಲಿ ಕೆಮರಾ ಇರಲಿಲ್ಲ. ನನ್ನ ಮೊಬೈಲ್ ಸಹ ಕೈ ಕೊಟ್ಟಿತು. ಅದನ್ನು ನೋಡಿ ಕರುಳನ್ನು ಹಿಚುಕಿದ ಅನುಭವ. ಅಲ್ಲಿಗೆ 
ಬಂದ ನನ್ನ ಮಗಳೂ ನೊಂದು ಕೊಂಡಳು. ನಾವು ನೊಂದು ಕೊಳ್ಳುತ್ತಿದ್ದರೂ ಮಕ್ಕಳಿಬ್ಬರೂ ಆನಂದದಿಂದ ನಗುತ್ತಿದ್ದವು

ಅದೃಷ್ಟಶಾತ್ ಯಾರೂ ಮಕ್ಕಳನ್ನು ಅಲ್ಲಿಂದ ಓಡಿಸಲಿಲ್ಲ.



(ರಾಜೇಂದ್ರ ಬಿ ಶೆಟ್ಟಿಯವರು ವೃತ್ತಿಯಲ್ಲಿ ಇಂಜಿನಿಯರ್. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸೂಕ್ಷ್ಮಮನಸ್ಸಿನ ಮಾನವತಾವಾದಿ. ಇವು ಅವರು ಫೇಸ್ಬುಕ್ಕಲ್ಲಿ ಹಂಚಿಕೊಂಡ ಕೆಲವು ನೆನಪುಗಳು.)



No comments:

Post a Comment