Friday 19 July 2013

ಎರಡು ಬೆರಳುಗಳ ಮಡಚುತ್ತಾ..
     ಹೀಗೊಂದು ಅಭಿಪ್ರಾಯವಿದೆ - ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ನಂತರದಲ್ಲಿ ಹಲವು ಬಾರಿ ಮಾನಸಿಕ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಆಘಾತದಿಂದ ಚೇತರಿಸಿಕೊಳ್ಳಲೂ ಸಮಯವಿಲ್ಲದೆ ಆದಷ್ಟು ಬೇಗ ಆಕೆ ಹತ್ತಿರದ ಪೋಲಿಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕು. ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೂ ಸಂಕೋಚ ಬಿಟ್ಟು ಉತ್ತರಿಸಬೇಕು. ಪ್ರಥಮ ಮಾಹಿತಿ ವರದಿ ದಾಖಲಾಯಿತೆಂದರೆ ಅವಳನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕಳಿಸುತ್ತಾರೆ. ಅಲ್ಲಿ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶರೀರವನ್ನು ಪರೀಕ್ಷೆಗಾಗಿ ಒಡ್ಡಿಕೊಳ್ಳಬೇಕು. ಅವಳ ದೇಹದ ಪ್ರತಿಯೊಂದು ಭಾಗವನ್ನೂ ವೈದ್ಯಕೀಯ ಪುರಾವೆಗಾಗಿ ಪರೀಕ್ಷಿಸಲಾಗುತ್ತದೆ. ಅವಳ ಒಳ ಉಡುಪನ್ನು ಹೆಚ್ಚಿನ ಪರೀಕ್ಷೆಗಾಗಿ ಸಂಗ್ರಹಿಸಲಾಗುತ್ತದೆ. ಜನನಾಂಗದ ಪರೀಕ್ಷೆಯೂ ನಡೆಯುತ್ತದೆ. ಇವೆಲ್ಲಕ್ಕೂ ಅವಳ ಸಮ್ಮತಿಯನ್ನು ಪಡೆದುಕೊಂಡಿರುತ್ತಾರೆ ನಿಜ. ಆದರೂ ಅವಳು ಮಾನಸಿಕವಾಗಿ ಇವಕ್ಕೆಲ್ಲ ಸಿದ್ಧಳಾಗಿದ್ದಾಳೆಯೇ ಎಂದು ತಿಳಿದುಕೊಳ್ಳುವ, ಸಿದ್ಧಳಾಗಿಲ್ಲದಿದ್ದರೆ ಅವಳನ್ನು ಸಿದ್ಧಗೊಳಿಸುವ ಆಪ್ತಸಮಾಲೋಚಕ(Councellor)ರ ಪಾತ್ರ ನಮ್ಮ ಭಾರತೀಯ ಸನ್ನಿವೇಶಕ್ಕೆ ಇನ್ನೂ ಅಪರಿಚಿತ.

     ನಮ್ಮ ಸಮಾಜಕ್ಕೆ ಅತ್ಯಾಚಾರ ಹತ್ತರ ಜೊತೆ ಹನ್ನೊಂದರಂತೆ ಒಂದು ಅಪರಾಧ ಮಾತ್ರ. ಎಂದೇ ತನಿಖೆಯ ಯಾವ ಹಂತದಲ್ಲೂ ಸೂಕ್ಷ್ಮತೆಯನ್ನು ನಿರೀಕ್ಷಿಸುವಂತಿಲ್ಲ. ನ್ಯಾಯದಾನ ವ್ಯವಸ್ಥೆಯಲ್ಲಿ ಪೊಲೀಸರು, ವೈದ್ಯರು ಕೊಡುವ ವರದಿಗಳು ಅನ್ಯಾಯಕ್ಕೆ ಒಳಗಾದವರ ಹಿತವನ್ನು ಕಾಯುವುದಕ್ಕೆ ಪೂರಕವಾಗಿರಬೇಕು. ಆದರೆ ಎಷ್ಟೋ ಸಲ ಕೆಲವು ಮಾಹಿತಿಗಳನ್ನು ಪ್ರತಿವಾದಿಯ ದುಷ್ಟ ಕ್ರಿಮಿನಲ್ ವಕೀಲರು ಇಡೀ ಪ್ರಕರಣವನ್ನು ದುರ್ಬಲಗೊಳಿಸಿ ಅಪರಾಧಿಯನ್ನು ಖುಲಾಸೆಗೊಳಿಸಲು ಜಾಣತನದಿಂದ ಉಪಯೋಗಿಸುತ್ತಾರೆ. ಇದರಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮೇಲೆ ನಡೆಸುವ, ಈಗ ಬಹುವಾಗಿ ಚರ್ಚಿತವಾಗುತ್ತಿರುವ ಎರಡು ಬೆರಳಿನ ಪರೀಕ್ಷೆ (Two Finger Test)ಯ ವರದಿಯೂ ಒಂದು.

   ಲೈಂಗಿಕ ಅಪರಾಧಗಳಿಗೆ ಬಲಿಯಾದ ಮಹಿಳೆಯರ ಪರ ಹೋರಾಡುವ ಮುಂಬಯಿಯ ಒಂದು ಸಂಘಟನೆಯ ಕಾರ್ಯಕರ್ತೆ ಪದ್ಮಾ ದೇವಸ್ಥಳಿಯವರ ಪ್ರಕಾರ, ನಮ್ಮ ಇಡೀ ವ್ಯವಸ್ಥೆ ಲೈಂಗಿಕ ಅಪರಾಧಕ್ಕೆ ಒಳಗಾದ ಮಹಿಳೆಯ ದೂರನ್ನು ನಂಬಲು ನಿರಾಕರಿಸುವ ಮನಸ್ಥಿತಿಯಲ್ಲಿದೆ. ಹಾಗಾಗಿ ಎರಡು ಬೆರಳಿನ ಪರೀಕ್ಷೆ ನಮ್ಮ ವಿಧಿವಿಜ್ಞಾನ ಶಾಸ್ತ್ರದಲ್ಲಿ ಇನ್ನೂ ಉಳಿದುಕೊಂಡಿದೆ.















ಏನಿದು ಈ ಎರಡು ಬೆರಳಿನ ಪರೀಕ್ಷೆ?
     ಇದು ಮಹಿಳೆಯ ಕನ್ಯತ್ವದ ಪರೀಕ್ಷೆ. ಇದು ವೈದ್ಯರು ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮೇಲೆ ನಡೆಸುವ ಒಂದು ವೈದ್ಯಕೀಯ ಪರೀಕ್ಷೆ. ಎರಡು ಬೆರಳುಗಳನ್ನು ಆಕೆಯ ಯೋನಿಯೊಳಗೆ ತೂರಿಸಿ ಅದರ ಬಿಗಿ, ಸಡಿಲಿಕೆ, ಅವಕಾಶಗಳ ಆಧಾರದ ಮೇಲೆ ಅವಳು ಲೈಂಗಿಕ ಕ್ರಿಯೆಗೆ ಮೊದಲಿನಿಂದಲೂ ಒಳಗಾಗುತ್ತಿದ್ದಳೇ ಎಂಬುದನ್ನು ನಿರ್ಧರಿಸುತ್ತಾರೆ. ಯೋನಿಪೊರೆಯ ಸ್ಥಿತಿಯ ಬಗ್ಗೆಯೂ ವರದಿ ಕೊಡುತ್ತಾರೆ. ಅವರು ವೈದ್ಯಕೀಯ ಸಾಕ್ಷ್ಯ ಸಂಗ್ರಹಿಸಲು ನಡೆಸುವ ಅನೇಕ ಪರೀಕ್ಷೆಗಳಲ್ಲಿ ಇದೂ ಒಂದು.

     ಈ ವರದಿಯನ್ನು ಪ್ರತಿವಾದಿ ವಕೀಲರು ಅತ್ಯಾಚಾರಕ್ಕೆ ಒಳಗಾದ ಅವಿವಾಹಿತ ಮಹಿಳೆಯನ್ನು ಸಡಿಲ ವ್ಯಕ್ತಿತ್ವದವಳು ಎಂದು ಸಾಧಿಸಿ ಇಡೀ ಪ್ರಕರಣವನ್ನು ದುರ್ಬಲಗೊಳಿಸುವ ಸಾಕ್ಷಿಯಾಗಿ ಉಪಯೋಗಿಸುತ್ತಾರೆ. ಅವಳ ವೈಯುಕ್ತಿಕ ಬದುಕು ಕಟಕಟೆಯಲ್ಲಿ ನಿಲ್ಲುತ್ತದೆ. ಅವಳು ಸಮ್ಮತಿಸಿಯೇ ಸಂಭೋಗ ನಡೆಯಿತು ಎಂದು ವಾದಿಸಲು ಇದನ್ನು ಉಪಯೋಗಿಸಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಸರ್ಕಾರಿ ವಕೀಲರೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪರ ಸಮರ್ಥವಾಗಿ ವಾದ ಮಂಡಿಸುವುದಿಲ್ಲ. ಹೀಗೆ ಅಪರಾಧಿಗೆ ಶಿಕ್ಷೆಯಾಗುವ ಸಾಧ್ಯತೆ ಕಡಿಮೆಯಾಗುತ್ತ ಹೋಗುತ್ತದೆ.

     ಕಳೆದ ಎಷ್ಟೋ ವರ್ಷಗಳಿಂದ ಮಹಿಳಾಪರ ಸಂಘಟನೆಗಳು ಈ ಪರೀಕ್ಷೆಯ ವಿರುದ್ಧ ದನಿ ಎತ್ತುತ್ತಾ ಬಂದಿವೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಮಾನ್ಯವಲ್ಲದ ಪರೀಕ್ಷೆ ಎಂದು ಸಾರಿದೆ. ೨೦೧೦ ರಲ್ಲಿ ಮಾನವ ಹಕ್ಕುಗಳ ಕಾವಲು(Human Rights Watch)   ಇದನ್ನು ಬಹಿಷ್ಕರಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಜನವರಿ ೨೦೧೨ರಲ್ಲಿ ಸರ್ವೋಚ್ಛ ನ್ಯಾಯಾಲಯ ಇದನ್ನು ಕೈಬಿಡುವ ಕಾನೂನು ರೂಪಿಸಿಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸಲಹೆ ಮಾಡಿದೆ. ಈಗ ಮತ್ತೆ ಅದೇ ನ್ಯಾಯಾಲಯ ಈ ಎರಡು ಬೆರಳಿನ ಪರೀಕ್ಷಾ ವರದಿ ಅವಳು ಹಿಂದೆಯೂ ಸಂಭೋಗಕ್ಕೆ ಒಳಗಾಗುತ್ತಿದ್ದಳು ಎಂದು ಸಾರಿದರೂ ಕೂಡ ಅತ್ಯಾಚಾರವನ್ನು ಅವಳ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ಎಂದು ಸಾಧಿಸಲು ಉಪಯೋಗಿಸುವಂತಿಲ್ಲ ಎಂದು ಹೇಳಿದೆ. ಅಲ್ಲದೆ ಇದು ಅವಳ ಖಾಸಗಿತನಕ್ಕೆ, ದೈಹಿಕ ಮತ್ತು ಮಾನಸಿಕ ಗೌರವ ಮತ್ತು ಘನತೆಗೆ ಭಂಗ ತರುವಂತಹ ಪರೀಕ್ಷೆ ಎಂದು ಕೂಡ ಅಭಿಪ್ರಾಯಪಟ್ಟಿದೆ. ಸರ್ಕಾರಗಳು ಇದನ್ನು ಹೊರತುಪಡಿಸಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಸುರಕ್ಷಿತವಾದ ವೈದ್ಯಕೀಯ ಸೇವೆಯ ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ಆದೇಶಿಸಿದೆ.

     ಅತ್ಯಾಚಾರ(Rape)ವೆಂದರೆ ಪುರುಷನು ಮಹಿಳೆಯ ಮೇಲೆ ಅವಳ ಇಚ್ಛೆಗೆ ವಿರುದ್ಧವಾಗಿ ಅಥವಾ ಒಪ್ಪಿಗೆ ಇಲ್ಲದೆ ನಡೆಸುವ ಸಂಭೋಗ. ಭಾರತೀಯ ದಂಡ ಸಂಹಿತೆಯ 376ನೇ ಕಲಂ ಇದನ್ನು ವಿವರಿಸುತ್ತದೆ. ಅತ್ಯಾಚಾರದಲ್ಲಿ ಲೈಂಗಿಕ ಸಂಪರ್ಕ ಪೂರ್ಣಪ್ರಮಾಣದ್ದಾಗಿರಬೇಕೆಂದಿಲ್ಲ. ಅದನ್ನು ಖಚಿತಪಡಿಸಲು ಯೋನಿಪೊರೆ(Hymen)ಯ ಪರೀಕ್ಷೆಯೊಂದೇ ಸಾಧನವಲ್ಲ. ಯೋನಿಯಲ್ಲಿ ಬೆರಳು ತೂರಿಸದೆಯೇ ಯೋನಿಪೊರೆಯ ಸ್ಥಿತಿಯನ್ನು ಅರಿಯಬಹುದು. ಅಲ್ಲದೆ ಸಂಭೋಗದಲ್ಲಿ ಯೋನಿಪೊರೆ ಹರಿಯಲೇಬೇಕೆಂದೇನೂ ಇಲ್ಲ. ಕನ್ಯೆಯರಲ್ಲೂ ಯೋನಿಪೊರೆ ನಾನಾ ಕಾರಣಗಳಿಂದ ಹರಿದುಹೋಗಿರುವ ಸಾಧ್ಯತೆಯನ್ನೂ ನಿರ್ಲಕ್ಷಿಸುವಂತಿಲ್ಲ. ವೀರ್‍ಯ ಅಥವಾ ವೀರ್‍ಯಾಣುವನ್ನು ಯೋನಿಯಲ್ಲಿ ಪತ್ತೆ ಹಚ್ಚಲು ಅಲ್ಲಿಂದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸುತ್ತಾರೆ. ಪರೀಕ್ಷಾ ಸಮಯದಲ್ಲೆ ಸಂಗ್ರಹಿಸಿದ ದ್ರವವನ್ನು ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿಯೂ ವೀರ್‍ಯಾಣುವನ್ನು ಪತ್ತೆ ಹಚ್ಚಬಹುದು. ಸಂಭೋಗ ನಡೆದ ಮೂರು ನಾಲ್ಕು ದಿನಗಳವರೆಗೂ ಇದು ಸಾಧ್ಯ.

    ಭಾರತ ದೇಶದಲ್ಲಿ  ಅತ್ಯಾಚಾರ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸುತ್ತವೆ. ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಪರೀಕ್ಷೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೋ, ತಾಲೂಕು ಮಟ್ಟದ ಆಸ್ಪತ್ರೆಗೋ ಕರೆತರುತ್ತಾರೆ. ಅಲ್ಲಿ ಅವಳನ್ನು ಕನಿಷ್ಟ ತಜ್ಞತೆ ಇರುವ ಮಹಿಳಾ ವೈದ್ಯಾಧಿಕಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ.  ಈ ಪರೀಕ್ಷೆ ಆಸ್ಪತ್ರೆಯ ರೋಗಿಗಳನ್ನು ಪರೀಕ್ಷೆ ಮಾಡುವ ಕೋಣೆಯಲ್ಲೊ, ಹೆರಿಗೆ ಕೋಣೆಯಲ್ಲೊ ನಡೆಯುತ್ತದೆ. ಬೇರೆ ಕೆಲಸಗಳ ಒತ್ತಡಗಳ ನಡುವೆ ಈ ಪರೀಕ್ಷೆಯೂ ಅವಸರದಲ್ಲಿ ಮುಗಿದು ಹೋಗುತ್ತದೆ. ಆ ಹೊತ್ತಿಗೆ ಆಸ್ಪತ್ರೆಯ ಪ್ರಯೋಗಾಲಯವೂ ತೆರೆದಿರುವ, ಇದ್ದರೂ ತಜ್ಞತೆ ಇರುವ ಸಿಬ್ಬಂದಿ ಲಭ್ಯವಿರುವ ಸಾಧ್ಯತೆ ಕಡಿಮೆ.  ಎಷ್ಟೋ ಸಾರಿ ಮಹಿಳಾ ವೈದ್ಯಾಧಿಕಾರಿಗಳನ್ನು ಬೇರೆ ಆಸ್ಪತ್ರೆಯಿಂದ ಕರೆಸಬೇಕಾಗುತ್ತದೆ. ಆಗ ಅಮೂಲ್ಯವಾದ ಸಮಯವೂ ವ್ಯಯವಾಗಿ ಪರೀಕ್ಷಾ ಫಲಿತಾಂಶಗಳ ಗುಣಮಟ್ಟವೂ ಕಡಿಮೆಯಾಗುತ್ತದೆ. ದುರಂತವೆಂದರೆ, ಈ ಪರೀಕ್ಷೆಗೆ ಅತ್ಯಾಚಾರಕ್ಕೊಳಗಾದ ಮಹಿಳೆ ಮಾತ್ರವಲ್ಲ, ವೈದ್ಯರು, ಸಿಬ್ಬಂದಿಗಳೂ ಮಾನಸಿಕವಾಗಿ ತಯಾರಾಗಿರುವುದಿಲ್ಲ. ಎಷ್ಟೋ ವೈದ್ಯರು ಇಂತಹ ಪ್ರಕರಣಗಳು ಬರುತ್ತಿರುವ ಸೂಚನೆ ಸಿಕ್ಕ ಕೂಡಲೇ ರಜೆ ಹಾಕಿ ಕಣ್ಮರೆಯಾಗಿಬಿಡುವುದೂ ಉಂಟು! ಇಂತಹ ವಾತಾವರಣದಲ್ಲಿ ಎರಡರಲ್ಲೊಂದು ನಿರ್ಧಾರಕ್ಕೆ ಬರಲು ಅನುಕೂಲವಾಗಿರುವ ಎರಡು ಬೆರಳಿನ ಪರೀಕ್ಷೆಯನ್ನು ಮಾಡಿ ಅಭಿಪ್ರಾಯ ನೀಡುವುದು ಸುಲಭದ ದಾರಿಯಾಗಿ ಬಿಡುತ್ತದೆ.

      ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪರೀಕ್ಷೆ ಅತ್ಯಂತ ವೈಜ್ಞಾನಿಕವಾಗಿ, ಸುಸಜ್ಜಿತವಾಗಿ ನಡೆಯಬೇಕಾಗುತ್ತದೆ. ವೈದ್ಯರು ಮತ್ತು ಶೂಶ್ರೂಷಕಿಯರಿಗೆ ಈ ವಿಷಯದಲ್ಲಿ ಸೂಕ್ತ ತರಬೇತಿಯನ್ನೂ ಕಾಲಕಾಲಕ್ಕೆ ನೀಡಬೇಕಾಗುತ್ತದೆ. ಈ ಪರೀಕ್ಷೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನೂ ಒಳಗೊಂಡ ಕಿಟ್‌ಗಳನ್ನು ಎಲ್ಲಾ ಆಸ್ಪತ್ರೆಗಳಿಗೂ ಪೂರೈಸಬೇಕು. ಪರೀಕ್ಷಾ ಸಮಯದಲ್ಲಿ ಮಹಿಳೆಯ ಆತ್ಮಗೌರವಕ್ಕೆ ಚ್ಯುತಿಬರದಂತಹ ವಾತಾವರಣವಿರುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷೆಗೆ ಮುನ್ನ ಆಪ್ತಸಮಾಲೋಚಕರ ಸಹಾಯ ಸಿಗುವಂತೆ ನೋಡಿಕೊಳ್ಳಬೇಕು.

     ಆದರೆ ಭಾರತೀಯ ಸಮಾಜ, ಕಾನೂನು ಮತ್ತು ನ್ಯಾಯದಾನ ವ್ಯವಸ್ಥೆ ಇಷ್ಟು ಲಿಂಗಸೂಕ್ಷ್ಮತೆಯನ್ನು ಹೊಂದಿರುವುದೆಂದು ನಿರೀಕ್ಷಿಸಬಹುದೆ? ನಡೆವ ಅತ್ಯಾಚಾರ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ದೂರಾಗಿ ದಾಖಲಾಗುತ್ತವೆ. ಅದರಲ್ಲೂ ಅಸಮರ್ಪಕ ತನಿಖೆ, ಪರೀಕ್ಷೆ ಮತ್ತು ವಿಚಾರಣೆಗಳ ಕಾರಣದಿಂದ ಶಿಕ್ಷೆಗೊಳಗಾಗುವವರ ಪ್ರಮಾಣ ಶೇ. ೫.೧ರಷ್ಟು ಕಡಿಮೆಯಿದೆ.

     ಒಟ್ಟಿನಲ್ಲಿ ಈ ಎರಡು ಬೆರಳಿನ ಪರೀಕ್ಷೆ ಮಹಿಳೆಯ ಪರವಾಗಿ ಕಾನೂನಾತ್ಮಕವಾಗಿ ಬಳಕೆಯಾಗುವುದಕ್ಕಿಂತ ಹೆಚ್ಚು ಅವಳ ಶೀಲದ ಪಾವಿತ್ರ್ಯತೆಯನ್ನು ಅಳೆಯುತ್ತ ಅವಳ ವಿರುದ್ಧವೇ ಬಳಕೆಯಾಗುತ್ತಿರುವುದು ವಿಪರ್ಯಾಸವಾಗಿದೆ. ಎಂದೇ ಈ ಪರೀಕ್ಷೆ ಮಹಿಳಾ ಘನತೆಗೆ ಕುಂದುತರುವ, ಮಾನ್ಯತೆ ಇಲ್ಲದ ಪರೀಕ್ಷೆ ಎನಿಸಿಕೊಂಡಿದೆ. ಸರ್ವೋಚ್ಛ ನ್ಯಾಯಾಲಯ ಇದರ ಫಲಿತಂಶವನ್ನು ಅತ್ಯಾಚಾರಕ್ಕೊಳಗಾದ ಮಹಿಳೆಗೆ ವಿರುದ್ಧವಾಗಿ ಬಳಸುವಂತಿಲ್ಲ ಎಂದು ಸಾರಿದ್ದರೂ ಇದನ್ನು ಸಂಪೂರ್ಣವಾಗಿ ನಿಷೇಧಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಈ ನಿಟ್ಟಿನಲ್ಲಿ ಸೂಕ್ತ ಆದೇಶಗಳನ್ನು ತನಿಖಾಧಿಕಾರಿಗಳಿಗೆ, ವೈದ್ಯರಿಗೆ ನೀಡಬೇಕಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರನ್ನು ಪರೀಕ್ಷಿಸುವಾಗ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನೂ, ಅದಕ್ಕೆ ಬೇಕಾಗುವ ಸೌಲಭ್ಯಗಳನ್ನೂ ಬದಲಾದ ಕಾಲಮಾನಕ್ಕೆ ತಕ್ಕಂತೆ ಒದಗಿಸುವ ಜವಾಬ್ದಾರಿ ವ್ಯವಸ್ಥೆಯದೇ ಆಗಿದೆ.


-ಡಾ.ಜಿ. ಕೃಷ್ಣ 
(ವಿಜಯ ವಾಣಿಯಲ್ಲಿ ಪ್ರಕಟವಾದ ಬರಹ)
***

No comments:

Post a Comment