ಇಬ್ಬಗೆ
ನಾನು ಆ ಊರಿಗೆ ನನ್ನ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ಹೊಸೂರು ಅಂತ ಅದರ ಹೆಸರು. ನನ್ನ
ಸ್ನೇಹಿತ ಶ್ರೀನಿವಾಸರ ಸ್ವಂತ ಊರು ಅದು. ನಾನು ವಾಸವಾಗಿದ್ದ ತಾಲೂಕು ಕೇಂದ್ರದಿಂದ ಒಂದು ಗಂಟೆಯ ಬಸ್ ಪ್ರಯಾಣ. ಅವರ ಮನೆಯಲ್ಲಿ ಬೆಳಿಗ್ಗೆ ಚಾ ತಿಂಡಿ ಮುಗಿಸಿ ಹೀಗೆ ಆ ಸಣ್ಣ ಪೇಟೆಯಲ್ಲಿ ಕಾಲಾಡಿಸುತ್ತಿರುವಾಗ ಒಬ್ಬ ಹುಚ್ಚ ಎದುರಾದ. ನನಗೆ ಹುಚ್ಚರನ್ನು ಕಂಡರೆ ಭಯ, ಕನಿಕರದ ಜೊತೆ ಕುತೂಹಲ ಕೂಡ. ಯಾವ ಊರಿನವನೊ, ಯಾವ ಅಪ್ಪ, ಅಮ್ಮನ ಮಗನೋ, ಮನೆಯವರಿಗೆ ಇವ ಈ ರೀತಿ ತಿರುಗುತ್ತಿರುವುದು ಗೊತ್ತಿದೆಯೋ ಇಲ್ಲವೊ ಎಂದೆಲ್ಲ ಯೋಚಿಸಿ ಕೊಂಚ ಭಾವುಕನೂ ಆಗಿಬಿಡುತ್ತೇನೆ. ಇವನು ಇನ್ನೂ ಮುವತ್ತು ಮುವತ್ತೈದರ ತರುಣ. ಯಾರದೋ ನಿರೀಕ್ಷಯಲ್ಲಿರುವವನಂತೆ ಅಂಗಡಿಜಗಲಿಗಳಲ್ಲಿ ಕೂರುತ್ತಾ ಏಳುತ್ತಾ, ಬಾಯಲ್ಲಿ ಮಣಮಣಗುಟ್ಟುತ್ತಾ ತನ್ನ ಲೋಕದಲ್ಲಿ ತಾನಿದ್ದಾನೆ. ನಾನು ನನ್ನ ಸ್ನೇಹಿತರನ್ನು ಅವನು ಯಾರು ಅಂತ ಕೇಳಿದೆ. ಆಗ ಅವರು ಆತ ಇದೇ ಊರಿನವನೆಂದೂ, ಈಗ ಅವನ ತಂದೆ, ತಾಯಿ ತಂಗಿಯರೆಲ್ಲ ಇಲ್ಲೇ ಪಕ್ಕದ ಒಂದು ಊರಿನಲ್ಲಿ ಇದ್ದಾರೆಂದೂ ತಿಳಿಸಿದರು. ಇನ್ನೂ ಸ್ವಲ್ಪ ಕೆದಕಿದಾಗ ಈ ಕತೆಯನ್ನೂ ಹೇಳಿದರು.
ನಾಗಪ್ಪ, ಶೀನ ಮತ್ತು ಉಮಾಪತಿ ಆಪ್ತ ಸ್ನೇಹಿತರು. ಇದೇ ಊರಿನವರಾದ್ದರಿಂದ ಒಂದೇ ಶಾಲೆಯಲ್ಲಿ ಓದಿದವರು. ಜಾತ್ರೆ, ಸಿನೆಮಾ, ನಾಟಕ ಅಂತ ಜೊತೆಜೊತೆಗೆ ಸುತ್ತುವವರು. ಎಸ್ಸೆಲ್ಸಿವರೆಗೆ ಜೊತೆಯಾಗಿದ್ದವರು ಪಿಯುಸಿಗೆ ಬರುವಾಗ ನಾಗಪ್ಪ ತಾಲೂಕ ಕೇಂದ್ರದಲ್ಲಿ ಕಾಲೇಜಿಗೆ ಸೇರಿಕೊಂಡ. ಉಳಿದವರು ಇಲ್ಲೆ ವಿದ್ಯಾಭ್ಯಾಸ ಮುಂದುವರಿಸಿದರು. ನಾಗಪ್ಪ ಹಾಸ್ಟೆಲ್ಲಿನಲ್ಲಿದ್ದ. ರಜೆಯ ದಿನಗಳಲ್ಲಿ ಮೂವರೂ ಒಟ್ಟಿಗೆ ಸೇರಿ ತಿರುಗುವುದು, ಹರಟುವುದು ನಡೆದೇ ಇತ್ತು. ಊರಲ್ಲೂ ಈ ಮೂವರು ತ್ರಿಮೂರ್ತಿಗಳೆಂದೇ ಹೆಸರುವಾಸಿಯಾಗಿದ್ದರು. ಊರವರಿಗೆ ಇಷ್ಟು ವಿಭಿನ್ನ ಹಿನ್ನೆಲೆಯಿಂದ ಬಂದವರು ಹೇಗೆ ಅಷ್ಟು ಹತ್ತಿರವಾಗಿದ್ದಾರೆ ಅನ್ನುವುದೇ ಆಶ್ಚರ್ಯ. ಈ ಮೂವರ ಕೌಟುಂಬಿಕ ಹಿನ್ನೆಲೆ ಹಾಗಿತ್ತು. ನಾಗಪ್ಪನ ಮನೆಯ ಸ್ಥಿತಿ ಅಯೋಮಯ, ಅಪ್ಪ ಮಹಾ ಕುಡುಕ. ಒಂದು ಕಾಸೂ ದುಡಿಯುವವನಲ್ಲ. ತಾಯಿ ಅವರಿವರ ಮನೆಕೆಲಸ ಮಾಡುತ್ತಾ, ಹಪ್ಪಳ,ಸಂಡಿಗೆ ಮಾಡಿ ಮಾರುತ್ತಾ ಹೇಗೋ ಸಂಸಾರ ನಡೆಸುತ್ತಿದ್ದಳು. ನಾಗಪ್ಪನಿಗೆ ಇಬ್ಬರು ತಂಗಿಯಂದಿರು. ಮನೆಯಲ್ಲಿ ಸದಾ ಜಗಳ, ಗಲಾಟೆ. ಅಪ್ಪ ದುಡ್ಡು ಕೊಡದಿದ್ದರೆ ಕೊಂದೇ ಬಿಡುವುದಾಗಿ ಅಮ್ಮನಿಗೆ ಧಮಕಿಹಾಕುತ್ತಲೇ ಇರುತ್ತಿದ್ದ. ಅದೇ ರೀತಿ ಹೊಡೆಯುತ್ತಲೂ ಇದ್ದ. ಅಂತಹ ವಾತಾವರಣದಲ್ಲಿ ಮಗನಿಗೆ ಓದಲು ಕಷ್ಟ ಅಂತ ನಾಗಪ್ಪನನ್ನು ತಾಯಿ ಹಾಷ್ಟೆಲ್ಲಿಗೆ ಸೇರಿಸಿದ್ದು. ಎಲ್ಲಿ ಅಮ್ಮನನ್ನು ಅಪ್ಪ ಕೊಂದುಬಿಡುತ್ತಾನೊ ಎಂಬ ಭಯದಲ್ಲೆ ನಾಗಪ್ಪ ಸದಾ ಇರುತ್ತಿದ್ದಂತಿತ್ತು.
ಶೀನನ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅವನ ಅಪ್ಪ ದೊಡ್ಡ ಜಮೀನುದಾರರು. ಇವನೊಬ್ಬನೆ ಮಗ. ಊರಿಗೇ ಮುಖಂಡರಾಗಿದ್ದ ಅಪ್ಪ ಎಲ್ಲರಿಗೂ ಬೇಕಾದ ಮನುಷ್ಯ. ಒಟ್ಟಿನಲ್ಲಿ ಶೀನನದು ನೆಮ್ಮದಿಯ ಬದುಕು.
ಉಮಾಪತಿಯ ತಂದೆ ಪ್ರೈಮರಿ ಶಾಲೆ ಮೇಷ್ಟ್ರು. ಅವನಿಗೆ ಒಬ್ಬಳು ತಂಗಿ. ಆರ್ಥಿಕ ಸಮಸ್ಯೆ ಬಿಟ್ಟರೆ ಅವನದೂ ಸಮಸ್ಯೆಗಳಿಲ್ಲದ ಸಂಸಾರ. ನಾಗಪ್ಪ ಮನೆಯ ಸಮಸ್ಯೆಗಳಿಂದ ಮಂಕುಬಡಿದು ಕೂತಾಗ ಇಬ್ಬರೂ ತಮಗೆ ತೋಚಿದಂತೆ ಅವನಿಗೆ ಸಮಾಧಾನ ಮಾಡುತ್ತಿದ್ದರು. ಒಟ್ಟಿಗೆ ಕೂತು ಹರಟಿ ಅವನು ಗೆಲುವಾಗುವಂತೆ ನೋಡಿಕೊಳ್ಳುತ್ತಿದ್ದರು. ಚೆಂಡೆ ಶಬ್ಧ ಕೇಳುವ ದಿಕ್ಕಿನಲ್ಲಿ ಬಯಲಾಟ ಎಲ್ಲಿ ಅಂತ ಹುಡುಕುತ್ತಾ ಹೋಗಿ ನೋಡಿ ಬರುವುದು ಮೂವರಿಗೂ ಬಹು ಖುಶಿಕೊಡುವ ಹವ್ಯಾಸ.
ನಾಗಪ್ಪ ಪೇಟೆಯಲ್ಲಿ ಹಾಷ್ಟೆಲ್ಲಿಗೆ ಸೇರಿದ್ದು ಶೀನ ಮತ್ತು ಉಮಾಪತಿಗೆ ಬಹಳ ಬೇಸರದ ಸಂಗತಿ. ಬೇಕೆಂದಾಗ ಮೂವರೂ ಸೇರುವುದು ಸಾದ್ಯವಿರಲಿಲ್ಲ. ಆತ ಶನಿವಾರ ಬಂದು ರವಿವಾರ ಸಂಜೆಯೇ ಹೊರಟುಬಿಡುತ್ತಿದ್ದ. ಅಷ್ಟರಲ್ಲಿ ಇವರ ತಿರುಗಾಟ ಹರಟೆ ಎಲ್ಲಾ ಮುಗಿಯಬೇಕು. ಚೆನ್ನಾಗಿ ಓದಿ ಸಂಪಾದಿಸಿ ಮನೆ ಸರಿಮಾಡುವ, ಅಮ್ಮನನ್ನು, ತಂಗಿಯರನ್ನು ಸುಖವಾಗಿಡುವ ಗುಂಗಿನಲ್ಲಿದ್ದ ನಾಗಪ್ಪ ಇವರು ಹಾಕಿಕೊಳ್ಳುವ ಕಾರ್ಯಕ್ರಮಗಳನ್ನೆಲ್ಲಾ ತಲೆಕೆಳಗೆ ಮಾಡಿಬಿಡುತ್ತಿದ್ದ. ಮಧ್ಯೆ ಮಧ್ಯೆ ಅವನ ಅಪ್ಪ ಮಾಡುವ ಅವಾಂತರಗಳಿಂದ ನೊಂದ ಅಮ್ಮನನ್ನು ಸಂತೈಸಲೂ ಅವನು ಓಡಿಬರಬೇಕಾಗುತ್ತಿತ್ತು. ಆ ವಿಷಯದಲ್ಲಿ ಮಾತ್ರ ಅವನು ಆತಂಕದಿಂದಲೇ ಇರುತ್ತಿದ್ದ. ಅವನ ಅಮ್ಮ ಶೆಟ್ಟರ ಅಂಗಡಿಯಿಂದ ಫೋನ್ ಮಾಡುತ್ತಿದ್ದಳು. ಇವರೂ ಕೂಡ ಶೀನನ ಮನೆಯ ಫೋನ್ ನಿಂದ ಆಗಾಗ ನಾಗಪ್ಪನಿಗೆ ಫೋನ್ ಮಾಡಿ ಮಾತಾಡುತ್ತಿದ್ದರು. ಜಾತ್ರೆಗೆ ಬಾ, ಬಯಲಾಟ ಉಂಟು ಬಾ ಅಂತ ಒತ್ತಾಯಿಸುತ್ತಿದ್ದರು. ಹೆಚ್ಚಿನ ಸಲ ಇವರ ಒತ್ತಾಯಕ್ಕೆ ಅವನು ಬಗ್ಗುತ್ತಿರಲಿಲ್ಲ. ಹೋಗಿಬರುವ ಖರ್ಚು, ಅಭ್ಯಾಸಗಳ ನೆಪವೊಡ್ಡಿ ಬರುತ್ತಲೇ ಇರಲಿಲ್ಲ. ಒಟ್ಟಿನಲ್ಲಿ ಇವರಿಬ್ಬರಿಗೂ ನಾಗಪ್ಪ ತಮ್ಮಿಂದ ತಪ್ಪಿಸಿಕೊಂಡಂತೆ ಕಂಡಿತು. ಅವನು ಬೇಕೆಂದಾಗ ಸಿಗದಿರುವುದು ದೊಡ್ಡ ಕೊರತೆಯಾಗಿ ಅವರಿಗೆ ಕಾಣುತ್ತಿತ್ತು.
ಈ ಅಗಲುವಿಕೆಯ ಬೇಸರ ದಿನಗಳೆದಂತೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ಹೋಯಿತು. ನಾಗಪ್ಪ ಇದನ್ನು ಗ್ರಹಿಸಲಿಲ್ಲವೆಂದು ಕಾಣುತ್ತದೆ. ಅದು ಇವರಿಬ್ಬರಲ್ಲಿ ಒಂದು ತರದ ಹತಾಶೆಯನ್ನು ಹುಟ್ಟಿಸತೊಡಗಿತು. ಒಮ್ಮೆ ಊರಲ್ಲಿ ಎರಡು ಮೇಳಗಳ ಆಟ. ಜೋಡಾಟ ಎಂದು ಕರೆಯುವ ಇದರಲ್ಲಿ ಎರಡು ರಂಗಸ್ಥಳದಲ್ಲಿ ಎರಡು ಮೇಳಗಳ ಕಲಾವಿದರು ಒಂದೇ ಪ್ರಸಂಗವನ್ನು ಆಡುತ್ತಾರೆ. ಅದನ್ನು ನೋಡುವ ಮಜವೇ ಬೇರೆ. ಅದು ಇದ್ದಿದ್ದು ರಜೆ ಇಲ್ಲದ ವಾರದ ಮಧ್ಯದ ದಿನದಲ್ಲಿ. ತಾನು ಬರುವುದಿಲ್ಲ ಎಂದು ನಾಗಪ್ಪ ಹೇಳಿಹೋಗಿಬಿಟ್ಟಿದ್ದಾನೆ. ಇವರಿಗೆ ಅವನನ್ನು ಹೇಗಾದರೂ ಮಾಡಿ ಕರೆಸಬೇಕು ಎನ್ನುವ ಹಠ ಹುಟ್ಟಿಬಿಟ್ಟಿತು. ಒಂದು ಯೋಜನೆ ಹಾಕಿಯೇಬಿಟ್ಟರು.
ನಾಗಪ್ಪನಿಗೆ ಮನೆಯ ವಿಷಯದಲ್ಲಿದ್ದ ಆತಂಕ ಗೊತ್ತಿದ್ದದ್ದೆ. ಅಂದು ಸಂಜೆ ಅವನಿಗೆ ಮನೆಯಲ್ಲಿ ದೊಡ್ಡ ಗಲಾಟೆಯಾಗಿದೆ ಅಂತಲೂ, ಅವನ ತಾಯಿಗೆ ಅಪ್ಪ ಹೊಡೆದು ಪೆಟ್ಟಾಗಿದೆ ಅಂತಲೂ ಫೋನ್ ಮಾಡುವುದು ಅಂತ ನಿಶ್ಚಯವಾಯಿತು. ಅವನು ಕೊನೆಯ ಬಸ್ಸಿಗೆ ಹೊರಟುಬರುತ್ತಾನೆ. ನಾಗಪ್ಪ ಬಸ್ಸಿನಿಂದ ಇಳಿಯುವಾಗಲೇ ಅವನಿಗೆ ನಿಜವಿಷಯ ತಿಳಿಸಿ ಸಮಾಧಾನಮಾಡಿ ಆಟಕ್ಕೆ ಕರೆದುಕೊಂಡು ಹೋಗುವುದು ಅಂತ ಅಂದುಕೊಂಡರು. ತಾವು ಮಾಡುತ್ತಿರುವುದು ಅತಿರೇಕದ ಕೆಲಸ ಅಂತ ಇಬ್ಬರಿಗೂ ಅನ್ನಿಸುತ್ತಿತ್ತು. ಆದರೆ ಯಾವುದೊ ಉದ್ವಿಗ್ನತೆ ಅವರನ್ನು ಆವರಿಸಿಬಿಟ್ಟಿತ್ತು. ಅವನು ತಮ್ಮನ್ನು ಕಾಡಿಸುತ್ತಿರುವುದಕ್ಕೆ ತಾವು ಪ್ರತೀಕಾರವಾಗಿ ಹೀಗೆ ಮಾಡುತ್ತಿದ್ದೇವೆ ಅಂದುಕೊಂಡರು. ನಂತರ ಅವನನ್ನು ಸಮಾಧಾನಪಡಿಸುವುದೇನೂ ಕಷ್ಟದ ಕೆಲಸವಲ್ಲ ಎಂಬ ವಿಶ್ವಾಸವೂ ಸೇರಿಕೊಂಡಿತು. ಅವನಿಗೂ ವಿಷಯ ಸುಳ್ಳು ಅಂತ ಗೊತ್ತಾದಾಗ ಸಂತೋಷವೇ ಆಗುತ್ತದೆ, ತಮ್ಮನ್ನು ಕ್ಷಮಿಸಿಯೇ ಕ್ಷಮಿಸುತ್ತಾನೆ ಎಂಬ ಭರವಸೆ ಮೂಡಿಬಿಟ್ಟಿತು. ಯೋಜನೆ ಕಾರ್ಯರೂಪಕ್ಕೆ ಬಂದೇಬಿಟ್ಟಿತು.
ಸಂಜೆ ಆರುಗಂಟೆಯ ಹೊತ್ತಿಗೆ ಶೀನನ ಮನೆಯಿಂದ ಫೋನ್ ಮಾಡಿದರು. “ನಿನ್ನ ಅಮ್ಮನಿಗೆ ಎಚ್ಚರ ಇದ್ದಹಾಗೆ ಇಲ್ಲ ಮಾರಾಯ” ಅನ್ನುವಾಗ ದನಿ ನಡುಗಿತು. ಇದೇನಾದರೂ ವಿಕೋಪಕ್ಕೆ ಹೋಗುತ್ತಿದೆಯೇ ಎಂಬ ಸಂಶಯ ಮೊತ್ತಮೊದಲ ಬಾರಿಗೆ ಅವರನ್ನು ತಟ್ಟಿರಬೇಕು. ಅವನು ಕೂಡ ಜಾಸ್ತಿ ಏನನ್ನೂ ಕೇಳಲಿಲ್ಲ. “ಬಸ್ಸಿಗೆ ಬರ್ತೇನ್ರೊ “ ಎಂದವನೆ ಫೋನ್ ಇಟ್ಟುಬಿಟ್ಟ.
ತಾವು ಮಾಡಿದ ಕೆಲಸ ತಪ್ಪು ಎಂಬ ಅರಿವು ಅವರಲ್ಲಿ ಹೆಚ್ಚುತ್ತಾ ಹೋಯಿತು. ಮನಸ್ಸಿನ ಸಂತೋಷ ಹಾರಿಹೋಯಿತು. ಮಂಕು ಬಡಿದುಕೊಂಡಿತು. ಒಬ್ಬರಿಗೊಬ್ಬರು ಮಾತಾಡುವುದೂ ಕಷ್ಟವಾಯಿತು. ಒಂಭತ್ತುಗಂಟೆಯವರೆಗೆ ಕಾಯುವುದು ನರಕಯಾತನೆಯಾಗಿಬಿಟ್ಟಿತು. ಸುಮ್ಮನೆ ಶಾಲಾಮೈದಾನಕ್ಕೆ ಹೋಗಿ ಕೂತರು. ಎಂಟೂವರೆಗೆಲ್ಲಾ ಬಸ್ಟ್ಯಾಂಡಿನ ಕಟ್ಟೆಯಲ್ಲಿ ಕೂತು ಒದ್ದಾಡಿದರು. ದೂರದಿಂದ ಆಟದ ಚೆಂಡೆಯ ಸದ್ದು ಕೇಳಿಸಲು ಶುರುವಾಯಿತು. ವಿಚಿತ್ರವೆಂದರೆ ಅವರಿಗೆ ಈಗ ಯಾವುದೂ ಬೇಡವಾಗಿದೆ. ತಾವು ಮೈಮೇಲೆ ಎಳೆದುಕೊಂಡ ಸನ್ನಿವೇಶದಿಂದ ಮುಕ್ತಿಪಡೆದರೆ ಸಾಕಾಗಿದೆ.
ಅಷ್ಟರಲ್ಲಿ ಬಸ್ಸು ಬಂತು. ತುಂಬಿತುಳುಕುತ್ತಿದ್ದ ಬಸ್ಸಿನಿಂದ ಒಬ್ಬೊಬ್ಬರೇ ಇಳಿಯತೊಡಗಿದರು. ಇವರಿಗೆ ಪ್ರತಿಯೊಬ್ಬರೂ ನಾಗಪ್ಪನಂತೆಯೇ ಕಾಣುತ್ತಿದ್ದರು. ಹೆಚ್ಚಿನವರು ಹೊಸೂರಿನವರೆ. ಅವರಲ್ಲಿ ಆತಂಕ, ಗಡಿಬಿಡಿಯಲ್ಲಿದ್ದಂತೆ ತೋರುತ್ತಿದ್ದ ನಾಕೈದು ಜನ ಇವರನ್ನು ನೋಡಿದವರೇ ನಿಂತುಬಿಟ್ಟರು. “ಏನಪ್ಪಾ ಇಲ್ಲಿ ನಿಂತುಬಿಟ್ಟಿದ್ದೀರಿ. ನಿಮ್ಮ ದೋಸ್ತನ ಸುದ್ದಿ ನಿಮಗಿನ್ನೂ ತಿಳಿದಿಲ್ಲ ಅಂತ ಕಾಣುತ್ತೆ. ಎಂತಾ ಆಕ್ಸಿಡೆಂಟಯ್ಯಾ ಅದು. ಅವನು ಬಸ್ಸು ತಪ್ಪಿಸಿಕೊಂಡಿದ್ದಕ್ಕೇ ಇರಬೇಕು, ಈ ಕಡೆ ಬರುವ ಯಾರದೋ ಬೈಕ್ ಹತ್ತಿದ್ದಾನೆ. ಬೈಕ್ ಲಾರಿ ಢಿಕ್ಕಿ. ನಾಗಪ್ಪ ಸ್ಥಳದಲ್ಲೆ ಹೋಗಿಬಿಟ್ಟನಪ್ಪಾ. ಅರ್ಧಗಂಟೆನೂ ಆಗಿಲ್ಲ. ಅವನ ಅಮ್ಮನಿಗೂ ಗೊತ್ತಾಗಿದೆಯೋ ಇಲ್ಲವೋ. ಬನ್ನಿ ನೀವೂ. ಅವಳನ್ನು ಹೇಗೆ ಸಮಾಧಾನ ಮಾಡುವುದಪ್ಪಾ ದೇವರೇ.” ಅನ್ನುತ್ತಾ ಇವರನ್ನು ತಳ್ಳಿಕೊಂಡೇ ನಾಗಪ್ಪನ ಮನೆಕಡೆಗೆ ನಡೆದರು.
ಇಷ್ಟು ಕತೆ ಹೇಳಿ ನನ್ನ ಗೆಳೆಯ ಶ್ರೀನಿವಾಸ ಐದುನಿಮಿಷ ಏನೂ ಮಾತಾಡಲಿಲ್ಲ. ಅವರ ಕಣ್ಣು ಒದ್ದೆಯಾದಂತೆ ಕಂಡಿತು. ಅಷ್ಟರಲ್ಲಿ ಆ ಹುಚ್ಚ ನಮ್ಮಹತ್ತಿರವೇ ಬಂದ. ನಮ್ಮಿಬ್ಬರನ್ನೂ ಸುಮಾರು ಹೊತ್ತು ನೋಡುತ್ತಾ ನಿಂತ. ಮತ್ತೆ ಮಣಮಣಗುಡುತ್ತಾ ತನ್ನ ಹುಡುಕಾಟ ಮುಂದುವರಿಸಿದ.
ಶ್ರೀನಿವಾಸ ಮಾತು ಮುಂದುವರಿಸಿದರು, “ನೋಡಿ ಇವರೆ, ಪ್ರತಿಯೊಬ್ಬ ವ್ಯಕ್ತಿಯೂ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸ್ತಾನೆ, ದಾರುಣವಾದದ್ದನ್ನ ಹೇಗೆ ಸಹಿಸ್ತಾನೆ ಎನ್ನುವುದನ್ನ ಮೊದಲೇ ಊಹಿಸುವುದಂತು ಕಷ್ಟ. ಅದಕ್ಕೆ ಉದಾಹರಣೆ ಮಾತ್ರ ನಿಮ್ಮ ಕಣ್ಮುಂದೆಯೆ ಇದೆ. ಆ ಇಬ್ಬರು ನತದೃಷ್ಟರಲ್ಲಿ ಒಬ್ಬ ಇವನೇ, ಈ ಹುಚ್ಚ. ಇನ್ನೊಬ್ಬ ಬೇರಾರೂ ಅಲ್ಲ, ಇದೇ ನಿಮ್ಮ ಸ್ನೇಹಿತ. ನಾನು ಹೇಗೆ ಏನೂ ಆಗದವನಂತೆ ಹೊರಬಂದು ಎಲ್ಲರೊಳಗೆ ಒಂದಾಗಿಬಿಟ್ಟೆ, ಉಮಾಪತಿ ಹೇಗೆ ಹೀಗಾದ?” ಉಮಾಪತಿಯನ್ನೆ ನೋಡುತ್ತಾ ಅವರು ಮುಂದುವರಿಸಿದರು, “ಇವನ ತಂದೆ ಬೇರೆ ಊರಿಗೆ ವರ್ಗಮಾಡಿಸಿಕೊಂಡರು. ಇವನ ಹುಚ್ಚಿಗೆ ಸಾಕಷ್ಟು ಚಿಕಿತ್ಸೆಯೂ ನಡೆಯಿತು. ಇವನು ಮಾತ್ರ ಈ ಊರನ್ನು ಬಿಡಲು ತಯಾರಿಲ್ಲ. ಬಲವಂತದಿಂದ ಕರೆದುಕೊಂಡು ಹೋದರೆ ಹೇಗೋ ಮತ್ತೆ ಬಂದು ಇಲ್ಲಿ ನಾಗಪ್ಪನನ್ನು ಹುಡುಕುತ್ತಿರುತ್ತಾನೆ. ಇವನಿಗೀಗ ನನ್ನ ಗುರುತೂ ಇಲ್ಲ, ಯಾರ ಗುರುತೂ ಇಲ್ಲ. ಬಹುಶಃ ಈಗ ಇವನು ಗುರುತುಹಿಡಿಯುವ ಒಬ್ಬನೇ ವ್ಯಕ್ತಿ ನಾಗಪ್ಪನೇ ಇರಬೇಕು. ಅವನು ಬರಬೇಕಲ್ಲ.”
ಅವರ ಗಂಟಲು ಕಟ್ಟಿತು. ನಾನು ಅವರ ಭುಜದ ಮೇಲೆ ಕೈ ಇಟ್ಟೆ. ನನ್ನ ಕಣ್ಣುಗಳೂ ಮಂಜಾದವು. ನಾವು ವಾಪಾಸು ಹೊರಟೆವು. ಹೆಜ್ಜೆಗಳು ಭಾರವಾದವು.
***

No comments:
Post a Comment