Wednesday 24 July 2013

 
 

ದೊಡ್ಡತನದ ಸಣ್ಣಕತೆ                    ಡಾ. ಜಿ. ಕೃಷ್ಣ

 

 
ಹತ್ತು ನಿಮಿಷ ಟೈಮುಂಟು ನೋಡಿ ಅಂತ ಡ್ರೈವರ್ ಕೂಗಿದ್ದು ಕೇಳಿಸಿತು. ಹೊರಗೆ ಕೊರೆಯುವ ಚಳಿ. ಇಳಿಯಬೇಕೋ ಬೇಡವೋ ಎಂಬ ದ್ವಂದ್ವದಲ್ಲಿ ಎರಡು ನಿಮಿಷ ಕಳೆದುಹೋಯಿತು. ಮುಂದೆ ಎಲ್ಲೂ ನಿಲ್ಲಿಸದೆ ಅರ್ಜೆಂಟಾಗಿಬಿಟ್ಟರೆ ಎಂದುಕೊಂಡು ಅವಳು ಲಗುಬಗೆಯಿಂದ ಇಳಿದಳು. ಚಳಿಗೆ ಹೆಜ್ಜೆಇಡಲೂ ಆಗುತ್ತಿಲ್ಲ. ಯಾವುದೋ ಒಂದು ಕಾಕಾ ಹೋಟೆಲ್ಲು. ಪಕ್ಕದಲ್ಲಿ ನಾರುತ್ತಿರುವ ಟಾಯ್ಲೆಟ್ಟು. ಹೊರಬರುತ್ತಿರುವಾಗ ಬಸ್ಸಿನ ಹಾರ್ನ್ ಕೇಳಿಸಿತು. ಹತ್ತುನಿಮಿಷ ಇನ್ನೂ ಆಗಿಲ್ಲ ಎಂಬ ಧೈರ್ಯ, ಲೇಡಿ ಪ್ಯಾಸೆಂಜರನ್ನು ಬಿಟ್ಟುಹೋಗುವುದಿಲ್ಲ ಎಂಬ ವಿಶ್ವಾಸ. ಆದರೆ ಅವಳು ಬಂದ ಸ್ಲೀಪರ್ ಖಾಸಗಿ ಬಸ್ಸು ಅವಳ ಕೂಗನ್ನು ಕೇಳಿಸಿಕೊಳ್ಳದೆ ಹೊರಟೇ ಹೋಯಿತು. ಏನೂ ತೋಚದೆ ನಿಂತುಬಿಟ್ಟಳು.

ಬೆಂಗಳೂರಿನಲ್ಲಿ ಓದುತ್ತಿರುವ ಮಗನನ್ನು ನೋಡಲು ಹೊರಟಿದ್ದ ಆಕೆ ಕ್ಷಣಾರ್ಧದಲ್ಲಿ ಅಸಹಾಯಕಳಾಗಿಬಿಟ್ಟಿದ್ದಳು. ಬೆಳಗಿನಜಾವ. ಆ ಬಸ್ಸಿನ ಆಫೀಸಿನ ನಂಬರೂ ಇಲ್ಲ. ಪುಣ್ಯಕ್ಕೆ ಕೈಚೀಲದಲ್ಲಿ ಮೊಬೈಲ್ ಇತ್ತು. ಅದರಲ್ಲಿ ಟಿಕೇಟು ಮಾಡಿಸಿದ್ದ ಏಜೆಂಟನ ನಂಬರಿತ್ತು. ಅವನಿಗೆ ಹತ್ತು ಕರೆ ಮಾಡಿದರೂ ಎತ್ತುತ್ತಿಲ್ಲ. ಅಷ್ಟರಲ್ಲಿ ನಾಕುಜನ ಸೇರಿ ತಲೆಗೊಂದರಂತೆ ಸಾಂತ್ವನ, ಪರಿಹಾರ ಹೇಳುತ್ತಿದ್ದರು. ಒಂದು ಕಾರಿನವ ವೇಗವಾಗಿ ಹೋಗಿ ಬಸ್ಸನ್ನು ಮುಟ್ಟಿಸಿಕೊಡುವ ಭರವಸೆ ಕೊಟ್ಟ. ಹತ್ತು ಅನುಮಾನ, ಭಯದೊಂದಿಗೆ ಹೊರಟುಬಿಟ್ಟಳು.

ಹತ್ತು ಕಿಲೋಮೀಟರ್ ಶರವೇಗದ ಪ್ರಯಾಣದ ಬಳಿಕ ಅವಳನ್ನು ಬಿಟ್ಟುಬಂದ ಬಸ್ ನಿಂತಿರುವುದು ಕಾಣಿಸಿತು. ಹೊರಗೆ ಸಣ್ಣ ಗುಂಪು ಸೇರಿತ್ತು. ಆ ಹೋಟೆಲಿನ ಹತ್ತಿರ ಯಾರೋ ಆ ಬಸ್ಸಿನ ಆಫೀಸಿಗೇ ಫೋನ್ ಮಾಡಿ ಅಲ್ಲಿಂದ ಡ್ರೈವರಿಗೆ ಸಂದೇಶ ಹೋಗಿ ಇವಳಿಗಾಗಿ ಬಸ್ಸು ನಿಂತು ಕಾಯುತ್ತಿತ್ತು. ಡ್ರೈವರನಿಗೆ ನೀರಿಳಿಸುವ ಸಿಟ್ಟಿನಲ್ಲಿ ಕೆಳಗಿಳಿದ ಆಕೆಗೆ ಒಂದುಕ್ಷಣ ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗಲಿಲ್ಲ. ಡ್ರೈವರ್ ಹದಿನೇಳು ಹದಿನೆಂಟರ ಕ್ಲೀನರ್ ಹುಡುಗನಿಗೆ ಬಾಯಿಗೆ ಬಂದಂತೆ ಬಯ್ಯುತ್ತಾ ಮುಖ ಮೂತಿ ನೋಡದೆ ಚಚ್ಚುತ್ತಿದ್ದ. ಇವಳನ್ನು ನೋಡಿದ್ದೇ ಅವನ ರೋಷ ಇನ್ನೂ ಹೆಚ್ಚಾದಂತೆ ಕಂಡಿತು. ಎಲ್ಲರೂ ಬಂದಿದ್ದಾರೆ ಎಂದು ಇವ ಸರ್ಟಿಫಿಕೇಟ್ ಕೊಟ್ಟಮೇಲೇ ತಾನು ಹೊರಟಿದ್ದು ಎನ್ನುವುದು ಡ್ರೈವರನ ವಾದ.

ಒಬ್ಬರ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕುವ, ಪ್ರಾಣ ಹೋಗುವ ತಪ್ಪನ್ನು ಮಾಡಿಯೂ ಜಯಿಸಿಕೊಂಡು ಓಡಾಡುವ ಎಷ್ಟೋ ಜನ ಅವಳ ತಲೆಯಲ್ಲಿ ಹಾದುಹೋದರು. ಆ ಹುಡುಗನ ನಿಸ್ಸಹಾಯಕ ಸ್ಥಿತಿ ಅವಳಲ್ಲಿ ಮನುಷ್ಯರಲ್ಲಿ ಹುಟ್ಟುವ ಕರುಣೆಯನ್ನ ಹುಟ್ಟಿಸಿತು. ಚಿಗುರು ಮೀಸೆಯ ಸುಟಿಸುಟಿಯಾದ ಹುಡುಗ. ಈ ಯೌವನದ ಮೊದಲ ದಿನಗಳಲ್ಲಿ ಇಂತಹ ಬೆಲೆಇಲ್ಲದ ಕೆಲಸಕ್ಕೆ ಸೇರಬೇಕಾಗಿಬಂದ ಅವನ ಅಸಹಾಯಕತೆ ಅವಳನ್ನ ಅಲುಗಾಡಿಸಿತು. ಎದೆಯಲ್ಲಿ ಒಂದು ತಂಪು ಭಾವನೆ ಮೂಡಿತು. ಬೆಚ್ಚಗೆ ಮಲಗಿ ಅಮ್ಮ ಬರುವ ಕನಸು ಕಾಣುತ್ತಿರುವ ಮಗ ನೆನೆಪಾದ.

ತಡಮಾಡದೆ ನುಗ್ಗಿ ಅವನನ್ನು ಬಿಡಿಸಿಕೊಂಡಳು. ಒಮ್ಮೆ ಮೈದಡವಿ ಕ್ರಾಪು ತಿದ್ದಿದಳು. ಡ್ರೈವರನ ಕಡೆಗೊಮ್ಮೆ ತಿರಸ್ಕಾರದ ನೋಟ ಬೀರಿ ಹುಡುಗನನ್ನ ತಳ್ಳಿಕೊಂಡು ಬಾಗಿಲಕಡೆಗೆ ನಡೆದುಬಿಟ್ಟಳು. ಕಣ್ಣು ಒದ್ದೆಯಾಗಿತ್ತು. ಹಿಂದಿನಿಂದ ಬರುತ್ತಿದ್ದ ಡ್ರೈವರನ ತಪ್ಪೊಪ್ಪಿಗೆಯ ಮಾತುಗಳು ಅವಳನ್ನು ತಲುಪಲೇ ಇಲ್ಲ.
 
***

No comments:

Post a Comment