'ಕಾವ್ಯ ಬೋಧಿ'ಯ ಕವಿತೆಗಳು ಡಾ.ಜಿ.ಕೃಷ್ಣ
1. ನೇಣಿಗೇರುವ ಮುನ್ನ
ಎಲ್ಲಿ ವರಾತ ತೆಗೆದುಬಿಡುತ್ತಾನೋ
ಎಂಬ ಭಯದಲ್ಲಿ
ಈವರೆಗೆ ನನ್ನ ಪೊರೆದ
ಖಾಕಿಯುಟ್ಟವರು
ಪಿಸುಗುಟ್ಟಿ, ಪೂಸಿಮಾಡಿ
ಮೈಯಲುಗಿಸಿ
ಎಚ್ಚರಿದ್ದವನ ಎಬ್ಬಿಸಿದರು.
ಜಾತ್ರೆಯಲಿ ಜೊತೆಗೆ ನಡೆದ
ಗೆಳೆಯರಂತೆ
ಟೀ ಕುಡಿಸಿ
ಹೊರಟೇ ಬಿಟ್ಟರು!
ಯಾವ ಆಸೆಯೂ
ಈಡೇರದವನ ಬಳಿ
ಕೊನೆಯಾಸೆಯ ಬಗ್ಗೆ ಕೇಳಿದಾಗ
ಈ ನಸುಕಿನಲ್ಲಿ
ಇನ್ನೊಮ್ಮೆ ಮಗುವಾಗಿಬಿಟ್ಟೆನೆ?
ಮನ ನೇವರಿಸುವ ಮಾತು
ಮೈ ನೇವರಿಸುವ ಮೌನ
ಎರಡೂ ಬೆರೆತಾಗ ಅಮರತ್ವ,
ಸೋತಾಗ ಮೃತ್ಯು.
ಒಮ್ಮೆ ಕೈ ನೀಡಿ ಗೆಳೆಯರೇ,
ಎಂದೋ ಆರಿದ
ಬಿಸುಪ ಹಿಡಿಯುತ್ತೇನೆ
ಮರೆತೇ ಹೋದ ಎಳೆಬಿಸಿಲ
ಮತ್ತೆ ತುಂಬಿಕೊಳ್ಳುತ್ತೇನೆ
ಎರಡೇ ಎರಡು ಕ್ಷಣ
ಕಾಯಿರಿ
ಅಮ್ಮನಿಗೆ ಒಂದು ಮಾತು ಹೇಳಿ ಬರುತ್ತೇನೆ..
2. ಬಸಿರು
ಕೆಲವೊಮ್ಮೆ
ಒಂಭತ್ತು ತುಂಬದೆಯೂ ಹೆರಬಹುದು
ಬೇನೆ ಬರದೆಯೂ ಹೆರಬೇಕಾಗಬಹುದು
ಇಲ್ಲದಿದ್ದರೆ
ತಾಯಿಗೋ ಶಿಶುವಿಗೋ ಅಪಾಯ
ಆದರೆ ಬಸುರಿಯಾಗದೆ
ಹೆರಲು ಹೋಗಬಾರದು
No comments:
Post a Comment