ಫೈಬ್ರಾಯ್ಡ್(Fibroid) ಎಂಬ ಗಡ್ಡೆ...
ಮಾದೇವಿಗೆ ೪೨ ವರ್ಷ. ಇಬ್ಬರು ಮಕ್ಕಳ ತಾಯಿಯಾದ ಈ ಮಹಿಳೆಗೆ ಕಳೆದ ಒಂದು ವರ್ಷದಿಂದ ತಿಂಗಳ ಸ್ರಾವ ತುಂಬ ಜಾಸ್ತಿ. ಜೊತೆಗೆ ಹೊಟ್ಟೆನೋವು ಬೇರೆ. ಇದರಿಂದಾಗಿ ಅವಳ ದೈನಂದಿನ ಕೆಲಸಗಳಿಗೂ ತೊಂದರೆ. ವೈದ್ಯರಲ್ಲಿಗೆ ಹೋದಾಗ ಇದು ಮುಟ್ಟು ನಿಲ್ಲುವ ಸಮಯದ ತೊಂದರೆ, ಧೈರ್ಯದಿಂದಿರಿ, ಒಳ್ಳೆ ಆಹಾರ ತೆಗೆದುಕೊಳ್ಳಿ, ರಕ್ತಹೀನತೆಯಾಗದಂತೆ ಕಬ್ಬಿಣಾಂಶದ ಮಾತ್ರೆ ತಗೊಳ್ಳಿ ಅಂತ ಸಲಹೆ ಮಾಡಿದರು. ಪ್ರತಿ ತಿಂಗಳು ತೆಗೆದುಕೊಳ್ಳಲು ನೋವು ನಿವಾರಕ ಮಾತ್ರೆ ಕೊಟ್ಟರು. ಒಂದಾರು ತಿಂಗಳು ಎಲ್ಲವೂ ಸ್ವಲ್ಪ ತಹಬಂದಿಗೆ ಬಂದಂತೆ ಕಂಡಿತು.
ಒಂದು ದಿನ ರಾತ್ರಿ ಅವಳಿಗೆ ಮೂತ್ರ ಕಟ್ಟಿತು. ಎಷ್ಟೇ ಪ್ರಯತ್ನಪಟ್ಟರೂ ಮೂತ್ರವಿಸರ್ಜನೆ ಸಾಧ್ಯವಾಗಲಿಲ್ಲ. ಹೊಟ್ಟೆನೋವು ಬೇರೆ. ಬೆಳಗಾಗುವಾಗ ಅವಳನ್ನು ಪಟ್ಟಣದ ಸ್ತ್ರೀರೋಗ ತಜ್ಙರಲ್ಲಿಗೆ ಕರೆತಂದರು. ಅವರು ತಕ್ಷಣ ಮೂತ್ರವನ್ನು ಪೈಪ್ ಮುಖಾಂತರ ತೆಗೆದರು. ಏಕೆ ಹೀಗಾಯ್ತು ಎಂದು ತಿಳಿದುಕೊಳ್ಳಲು ಅವಳ ಪರೀಕ್ಷೆಯನ್ನೂ ನಡೆಸಿದರು. ಅವಳ ಗರ್ಭಕೋಶ ಮೂರು ನಾಕು ಪಟ್ಟು ಗಾತ್ರದಲ್ಲಿ ದೊಡ್ಡದಾಗಿತ್ತು. ಅದರ ಮೈಮೇಲೆ ಲಿಂಬೆಹಣ್ಣಿನ ಗಾತ್ರದ ಗಡ್ಡೆಗಳಿದ್ದವು. ಹಿಗ್ಗಿದ ಗರ್ಭಕೋಶ ಮೂತ್ರಕೋಶದ ಕೊರಳನ್ನು ಒತ್ತಿದ್ದರಿಂದ ಮೂತ್ರ ವಿಸರ್ಜನೆಗೆ ತೊಂದರೆಯಾಗಿತ್ತು. ಸ್ಕ್ಯಾನಿಂಗ್ ಕೂಡ ಗರ್ಭಕೋಶದಲ್ಲಿ ಫೈಬ್ರಾಯ್ಡ್ ಗಡ್ಡೆಗಳು ಇರುವುದನ್ನು ದೃಢಪಡಿಸಿತು. ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆಮಾಡಿದರು.
ಏನಿದು ಫೈಬ್ರಾಯ್ಡ್?
ಫೈಬ್ರಾಯ್ಡ್ ಎನ್ನುವುದು ಪ್ರಾಪ್ತವಯಸ್ಸಿನ ಮಹಿಳೆಯರ ಗರ್ಭಕೋಶದಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿಯಲ್ಲದ ಒಂದು ವಿಧದ ಗಡ್ಡೆ. ಅಪಾಯಕಾರಿಯಲ್ಲದ ಎಂದರೆ ಕ್ಯಾನ್ಸರ್ ಅಲ್ಲದ ಮತ್ತು ಕ್ಯಾನ್ಸರಿಗೆ ಪರಿವರ್ತನೆಯಾಗುವ ಸಾಧ್ಯತೆ ಅತೀ ಕಡಿಮೆ ಇರುವ ಎಂದರ್ಥ. ಇದು ಅತಿ ಸಾಮಾನ್ಯವಾಗಿ ಕಂಡುಬರುವ ಗಡ್ಡೆ. ಈ ಗಡ್ಡೆಯ ಮೂಲ ಗರ್ಭಕೋಶದ ಗೋಡೆಯಲ್ಲಿನ ಸ್ನಾಯು ಜೀವಕೋಶಗಳು. ಹಾಗಾಗಿಯೆ ಇದನ್ನು ಮೈಯೋಮಾ(Myoma) ಎಂತಲೂ ಕರೆಯುತ್ತಾರೆ. ಗಾತ್ರದಲ್ಲಿ ಇದು ಸಣ್ಣ ಕಡಲೆಕಾಳಿನಿಂದ ಹಿಡಿದು ಫುಟ್ ಬಾಲಷ್ಟು ದೊಡ್ಡದೂ ಇರಬಹುದು. ಸಂಖ್ಯೆಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಮೊದಲು ಚಿಕ್ಕದಿದ್ದ ಫೈಬ್ರಾಯ್ಡ್ ಬೆಳೆಯುತ್ತ ಹೋಗುವ ಸಾಧ್ಯತೆಯೂ ಇರುತ್ತದೆ. ಕೆಲವು ಗಡ್ಡೆಗಳು ಗರ್ಭಕೋಶದ ಹೊರಮೈಗಷ್ಟೆ ಸೀಮಿತವಾಗಿರುತ್ತವೆ. ಕೆಲವೊಮ್ಮೆ ಗರ್ಭಕೋಶದೊಳಕ್ಕೂ ಚಾಚಿಕೊಂಡು ಅದರ ಅವಕಾಶವನ್ನೇ ಕಡಿಮೆ ಮಾಡುತ್ತವೆ.
ಈ ಗಡ್ಡೆಗಳು ವಯಸ್ಸಿಗೆ ಬರದ ಹೆಣ್ಣುಮಕ್ಕಳಲ್ಲಿ ಮತ್ತು ಮುಟ್ಟು ನಿಂತ ಮೇಲೆ ಕಾಣಿಸಿಕೊಳ್ಳುವುದಿಲ್ಲ
ಎಂದೇ ಹೇಳಬಹುದು. ೯೦% ಗಡ್ಡೆಗಳು ಮಹಿಳೆಗೆ ಯಾವುದೇ ತೊಂದರೆಯನ್ನೂ ಉಂಟುಮಾಡುವುದಿಲ್ಲವಾದದ್ದರಿಂದ ಅವುಗಳ ಪತ್ತೆಯೇ ಆಗುವುದಿಲ್ಲ. ಹಾಗಾಗಿ ಅವುಗಳಿಗೆ ಚಿಕಿತ್ಸೆ ನೀಡುವ ಪ್ರಮೇಯವೆ ಬರುವುದಿಲ್ಲ.
ಫೈಬ್ರಾಯ್ಡಿನಿಂದಾಗುವ ತೊಂದರೆಗಳು:
ಫೈಬ್ರಾಯ್ಡಿನಿಂದ ಉಂಟಾಗುವ ತೊಂದರೆಗಳು ಮಹಿಳೆಯ ವಯಸ್ಸು, ಅದು ಗರ್ಭಕೋಶವನ್ನು
ಆಕ್ರಮಿಸಿಕೊಂಡಿರುವ ಜಾಗ, ಅದರ ಗಾತ್ರ, ಸಂಖ್ಯೆ ಮುಂತಾದವುಗಳನ್ನು ಅವಲಂಬಿಸಿರುತ್ತವೆ.
*ಗರ್ಭಕೋಶದ ಮುಂಭಾಗ ಮತ್ತು ಅದರ ಕೊರಳಿನ ಭಾಗದಲ್ಲಿರುವ ಗಡ್ಡೆಗಳು ಮೂತ್ರ ವಿಸರ್ಜನೆಗೆ ತೊಂದರೆ ಕೊಡಬಹುದು. ಮೂತ್ರಕೋಶದ ಮೇಲೆ ಒತ್ತಡ ಬಿದ್ದಾಗ ಪದೇ ಪದೇ ಮೂತ್ರಕ್ಕೆ ಹೋಗಬೇಕೆನಿಸಬಹುದು. ಕೆಲವೊಮ್ಮೆ ಮೂತ್ರ ಕಟ್ಟಿಹೋಗಬಹುದು.
*ಗರ್ಭಕೋಶದ ಅವಕಾಶದೊಳಗೆ ಚಾಚಿಕೊಳ್ಳುವ ಗಡ್ಡೆಗಳು ಮಹಿಳೆಯ ತಿಂಗಳ ರಕ್ತಸ್ರಾವವನ್ನು ಹೆಚ್ಚಿಸಬಹುದು. ಮುಟ್ಟಿನ ದಿನಗಳಲ್ಲಿ ನೋವಿಗೂ ಕಾರಣವಾಗಬಹುದು. ಕೆಲವೊಮ್ಮೆ ಅವಳಲ್ಲಿ ಸಂತಾನ ಹೀನತೆ(Infertility)ಯನ್ನೂ ಉಂಟುಮಾಡಬಹುದು. ಗರ್ಭಿಣಿಯರಲ್ಲಿ ಗರ್ಭಪಾತವಾಗುವ ಮತ್ತು ಅವಧಿ ಪೂರ್ವ ಹೆರಿಗೆಯಾಗುವ ಸಾಧ್ಯತೆಯೂ ಇರುತ್ತದೆ. ಸಹಜ ಹೆರಿಗೆಗೂ ಅವು ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ.
*ಗರ್ಭಕೋಶದ ಹಿಂಭಾಗದಲ್ಲಿರುವ ಗಡ್ಡೆಗಳು ಮಲವಿಸರ್ಜನೆಗೂ ತೊಂದರೆ ಕೊಡಬಹುದು.
*೦.೧ರಿಂದ ೦.೫% ಫೈಬ್ರಾಯ್ಡುಗಳು ಕ್ಯಾನ್ಸರ್ ಗೆ ಬದಲಾವಣೆಯಾಗುವ ಸಾಧ್ಯತೆಯೂ ಇದೆ.
ಚಿಕಿತ್ಸೆ:
ಫೈಬ್ರಾಯ್ಡಿನ ಚಿಕಿತ್ಸೆ ಅದು ಕೊಡುತ್ತಿರುವ ತೊಂದರೆಗಳನ್ನು ಅವಲಂಬಿಸಿದೆ. ಸಣ್ಣ ಗಡ್ಡೆಗಳು ಯಾವುದೇ ತೊಡಕನ್ನೂ ಉಂಟುಮಾಡುವುದಿಲ್ಲ. ಕೆಲವೊಮ್ಮೆ ಸ್ಕ್ಯಾನಿಂಗಿನಲ್ಲಿ ಸಣ್ಣ ಪುಟ್ಟ ಫೈಬ್ರಾಯ್ಡುಗಳಿರುವುದು ಕಂಡುಬರಬಹುದು. ಅವುಗಳಿಗೆ ಯಾವುದೇ ಚಿಕಿತ್ಸೆಯ ಅಗತ್ಯ ಇರುವುದಿಲ್ಲ. ಇದನ್ನು ಆ ಮಹಿಳೆಗೆ ಮನವರಿಕೆ ಮಾಡಿಕೊಡಬೇಕು. ಕೆಲವೊಮ್ಮೆ ತನ್ನ ಗರ್ಭಕೋಶದಲ್ಲಿ ಸಣ್ಣ ಗಡ್ಡೆ ಇದೆ ಎನ್ನುವುದು ಭಯ ಹುಟ್ಟಿಸಿ ಖಿನ್ನತೆಗೆ ಕಾರಣವಾಗಬಹುದು. ಮುಟ್ಟಿನ ತೊಂದರೆಗಳಿಗೆ ಇವು ಕಾರಣವಿರಬಹುದು ಎಂಬ ಸಂಶಯವಿದ್ದಾಗಲೂ ಅವನ್ನು ನೋವು ನಿವಾರಕ ಔಷಧಿಗಳಿಂದ, ಹಾರ್ಮೋನುಗಳಿಂದ ಗುಣಪಡಿಸಲು ಪ್ರಯತ್ನಿಸಬೇಕು. ರಕ್ತಹೀನತೆ ಇದ್ದಲ್ಲಿ ಅದನ್ನು ಸರಿಪಡಿಸಬೇಕು.
ಗಡ್ಡೆಯ ಗಾತ್ರದಿಂದ ತೊಂದರೆಯಾಗುತ್ತಿರುವುದು ಖಚಿತಪಟ್ಟಾಗ ಶಸ್ತ್ರಚಿಕಿತ್ಸೆ(Myomectomy)ಯಿಂದ ಅದನ್ನು ತೆಗೆದುಹಾಕಬಹುದು. ಮಹಿಳೆ ಮಕ್ಕಳನ್ನು ಪಡೆದವಳಾಗಿದ್ದು ಮತ್ತೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದಲ್ಲಿ ಮತ್ತು ಅನೇಕ ಗಡ್ಡೆಗಳು ಇದ್ದು ಅವನ್ನು ತೆಗೆದುಹಾಕುವುದು ಸಾಧ್ಯವಿಲ್ಲದಿದ್ದಲ್ಲಿ ಗರ್ಭಕೋಶವನ್ನೆ ತೆಗೆದುಹಾಕುವ(Hysterectomy) ನಿರ್ಧಾರಕ್ಕೆ ಬರಬಹುದು. ಆದರೆ ಸಂತಾನಹೀನತೆಗೆ ಫೈಬ್ರಾಯ್ಡ್ ಕಾರಣವಾಗಿದ್ದಾಗ ಗಡ್ಡೆಗಳನ್ನಷ್ಟೆ ತೆಗೆದುಹಾಕಿ ಗರ್ಭಕೋಶವನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ಕೊಡಬೇಕಾಗುತ್ತದೆ. ಗರ್ಭಕೋಶದಿಂದ ಗಡ್ಡೆಗಳನ್ನಷ್ಟೆ ತೆಗೆಯುವ ಶಸ್ತ್ರಚಿಕಿತ್ಸೆ ಕಷ್ಟಕರವಾದುದು. ಹಾಗಾಗಿ ಉಳಿದ ಸಂದರ್ಭಗಳಲ್ಲಿ ಗರ್ಭಕೋಶವನ್ನೆ ತೆಗೆದುಹಾಕುವುದು ಮಹಿಳೆಯ ಹಿತದೃಷ್ಟಿಯಿಂದಲೂ ಸರಿಯಾದ ಚಿಕಿತ್ಸೆಯಾಗುತ್ತದೆ.
ಇತ್ತೀಚೆಗೆ ಈ ಗಡ್ಡೆಗಳ ಗಾತ್ರ ಕುಗ್ಗಿಸುವ ಹೊಸ ವಿಧಾನಗಳೂ ಬಂದಿವೆ. ಹಾರ್ಮೋನ್ ಸಂವಾದಿ ಔಷಧಿಗಳು ಬಂದಿವೆ. ಗರ್ಭಕೋಶಕ್ಕೆ ರಕ್ತ ಪೂರೈಸುವ ರಕ್ತನಾಳಗಳಿಗೆ ಕಟ್ಟುಗಳನ್ನು ಹಾಕುವುದರಿಂದಲೂ ಫೈಬ್ರಾಯ್ಡಿನ ಗಾತ್ರವನ್ನು ಕುಗ್ಗಿಸಬಹುದು. ಈ ವಿಧಾನಗಳನ್ನು ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸುವ ಪೂರ್ವಭಾವಿ ಸಿದ್ಧತೆಯಾಗಿಯೂ ಬಳಸುತ್ತಾರೆ.
ಶಸ್ತ್ರಚಿಕಿತ್ಸೆಯಿಂದ ತೆಗೆಯಲಾದ ಗಡ್ಡೆಯನ್ನು ಪರೀಕ್ಷೆಗಾಗಿ ಕಳಿಸಿ ಅದರ ನಿಜಸ್ವರೂಪವನ್ನು ಖಚಿತಪಡಿಸಿಕೊಳ್ಳಬೇಕು.
ನಮ್ಮ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅನೇಕ ಫೈಬ್ರಾಯ್ಡುಗಳಿದ್ದ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಅದರ ಚಿತ್ರಗಳನ್ನು ಇಲ್ಲಿ ನೋಡಬಹುದು.
***
ಬರಹ ಮತ್ತು ಚಿತ್ರ: ಡಾ.ಜಿ.ಕೃಷ್ಣ
No comments:
Post a Comment