ಒಂದು ಟಿಬೆಟ್ ಕವಿತೆ:
ಯಾವಾಗ ಹುಟ್ಟಿದೆ?
ಅಮ್ಮಾ, ನಾನು ಯಾವಾಗ ಹುಟ್ಟಿದ್ದು?
ಅಮ್ಮಾ, ನಾನು ಯಾವಾಗ ಹುಟ್ಟಿದ್ದು?
ನದಿ ಒಣಗಿದ ವರ್ಷ ಮಗೂ.
ಅದು ಯಾವಾಗ?
ಬೆಳೆ ಕರಟಿದಾಗ, ಎಷ್ಟೋ ದಿನ ಉಪವಾಸ ಕಳೆದಾಗ,
ನೀ ಬದುಕಲಾರೆಯೆಂದು ಹೆದರಿದ್ದಾಗ.
ಅದು? ನಾವು ಹೊಸ ಮನೆಗೆ ಹೋದ ವರ್ಷ?
ಅವರು ನಮ್ಮ ಮನೆ ಆಕ್ರಮಿಸಿದ ವರ್ಷ, ದೇಶಭಕ್ತರಿಗೆ ಮನೆ ಪಾಲು ಮಾಡಿಕೊಟ್ಟು
ನೀ ಹುಟ್ಟಿದ ಕೊಟ್ಟಿಗೆಗೆ ನಾವೆಲ್ಲ ದೂಡಲ್ಪಟ್ಟ ವರ್ಷ ಮಗೂ.
ಅದು ಯಾವ ವರ್ಷ?
ಅದು ಬೌದ್ಧಮಠ ನಾಶವಾದ ವರ್ಷ,
ಕಂಚಿನ ಮೂರುತಿಗಳ ಕರಗಿಸಿ ಬುಲೆಟ್ ಮಾಡಿದ ವರ್ಷ.
ಆಗಸ ಧೂಳಿನಿಂದ ತುಂಬಿದಾಗಲೇ ನೀ ಹುಟ್ಟಿದೆ ಮಗೂ.
ಅದು ಅಜ್ಜ ಸತ್ತ ವರ್ಷವೆ?
ಅದು ಅಜ್ಜನನ್ನು ಜೈಲಿಗೆ ದೂಡಿ
ಅಲ್ಲಿ ಅವ ಹೇಲು ಬಳಿದು ಸೊಳ್ಳೆ ಹೊಡೆದ ವರ್ಷ.
ಮನೆಯಲಿ ಗಂಡಸರೇ ಇಲ್ಲದಾಗ ನೀ ಹುಟ್ಟಿದೆ ಮಗೂ.
ಮನೆಗೋಡೆ ಕೆಡವಿದ ವರ್ಷ ಹುಟ್ಟಿದೆನೆ?
ಆ ವರ್ಷ ಪ್ರಾರ್ಥನಾ ಕೋಣೆ ಪುಡಿಪುಡಿ ಮಾಡಿದರು.
ಮರದ ತೊಲೆಗಳ ಸಿಗಿದರು. ಚಿತ್ರಪಟಗಳು ಕೊಳೆಯಾದವು.
ಪೂರ್ವದಿಂದ ಹುಚ್ಚುಗಾಳಿ ಬೀಸಿತು. ಆಗ ನೀ ಹುಟ್ಟಿದೆ ಮಗೂ.
ಅದು ಯಾವ ವರ್ಷ?
ಊರ ನಡುಮಧ್ಯ ಶಾಸ್ತ್ರಗ್ರಂಥಗಳ ಅವರು ಸುಟ್ಟ ವರ್ಷ.
ಪಕ್ಷ ಹೊಗಳುವ ಕ್ರಾಂತಿಗೀತೆಗಳ ಹಾಡಿದ ವರ್ಷ.
ಗರಿಕೆಯೂ ಚಿಗುರಲೊಲ್ಲೆ ಎನುವಾಗ ನೀ ಹುಟ್ಟಿದೆ ಮಗೂ.
ನೀನು ಹಾಡಲು ನಿಲಿಸಿದ ವರ್ಷವೆ ಅದು?
ನಮ್ಮ ನೆರೆಮನೆಯವರನು ಜೀತಕ್ಕೆ ಎಳೆದೊಯ್ದ ವರ್ಷ.
ಅವಳು ಕಾಲುವೆ ತೋಡುತ್ತ ಸೋಬಾನೆ ಹಾಡಿದ್ದಳು.
ಜನ ಒಬ್ಬೊಬ್ಬರೇ ಕಣ್ಮರೆಯಾಗುವಾಗ ನೀ ಹುಟ್ಟಿದೆ ಮಗೂ.
ಅದು ಯಾವಾಗ?
‘ತಲೆ ಹೊರಗಿಣುಕಿದರೆ ಸುತ್ತಿಗೆಯಲಿ ಬಡಿದು ಕೆಳಗುರುಳಿಸಲಾಗುವುದು’ ಎಂದು
ದೊಡ್ಡ ಕೆಂಪಕ್ಷರಗಳು ಗೋಡೆ ಮೇಲಣ ಘೋಷಣೆಯಾದ ವರ್ಷ..
ಸೂರ್ಯ ಲಜ್ಜೆಯಿಂದ ಆಗಸದಿಂದಲೇ ಮರೆಯಾದಾಗ ನೀ ಹುಟ್ಟಿದೆ ಮಗೂ.
ಅದು ಯಾವಾಗ?
***.
-ಭುಚುಂಗ್ ಸೋನಮ್ ಎಂಬ ಕವಿ ಟಿಬೆಟ್ ನಿರಾಶ್ರಿತರ ಕ್ಯಾಂಪಿನಿಂದ ಬರೆದಿದ್ದು
ಅನುವಾದ: ಡಾ. ಎಚ್.ಎಸ್ ಅನುಪಮಾ
ಅದು ಯಾವ ವರ್ಷ?
ReplyDeleteಅದು ಬೌದ್ಧಮಠ ನಾಶವಾದ ವರ್ಷ,
ಕಂಚಿನ ಮೂರುತಿಗಳ ಕರಗಿಸಿ ಬುಲೆಟ್ ಮಾಡಿದ ವರ್ಷ.
ಆಗಸ ಧೂಳಿನಿಂದ ತುಂಬಿದಾಗಲೇ ನೀ ಹುಟ್ಟಿದೆ ಮಗೂ.
- ಈ ಸಾಲುಗಳು ನನ್ನ ತಟ್ಟಿದವು ಸರ್. ಲಡಾಯಿಯಲ್ಲಿ ಈ ಕವಿತೆ ಓದಿದ್ದೆ...ಟಿಬೇಟಿಯನ್ನರ ಎದೆಯ ನೋವು ಕವಿತೆ ಯಾಗಿ ಮೂಡಿದ್ದು , ಮೇಡಂ ಬಗ್ಗೆ ಅಭಿಮಾನ ಹೆಚ್ಚಿಸಿತು .
ಧನ್ಯವಾದಗಳು ನಾಗರಾಜ್.
ReplyDelete