ಮನ್ಸೂರ್ ಅಲ್ ಹಲ್ಲಜ್ ಕವಿತೆಗಳು ಅನುವಾದ: ಡಾ. ಎಚ್.ಎಸ್ ಅನುಪಮಾ
೧.
ನಾನಾರ ಪ್ರೇಮಿಸುವೆನೋ ಅವನೇ ನಾನು
ಅವನಾರ ಪ್ರೇಮಿಸುವನೋ ಅದು ನಾನು
ಒಂದೇ ದೇಹದೊಳಗಿರುವ
ಎರಡು ಆತ್ಮಗಳು ನಾವು
ನನ್ನ ನೀ ನೋಡಬಲ್ಲೆಯಾದರೆ
ಅವನನೂ ನೋಡಬಲ್ಲೆ
ಅವನ ನೋಡಬಲ್ಲೆಯಾದರೆ
ನಮ್ಮಿಬ್ಬರನೂ ನೋಡಬಲ್ಲೆ.
೨.
ನನ್ನ ದೇವರನು ಹೃದಯದ ಕಣ್ಣಿಂದ ನೋಡಿದೆ
ಅವ ಕೇಳಿದ, ‘ನೀನಾರು?’ ನಾನೆಂದೆ, ‘ನಾನು ನೀನೇ.’
ಸಕಲ ಚರಾಚರಗಳಲಿ ಕಾಣುವವ ನೀನು
ನೀನಿಲ್ಲದ ಕಣ್ಣಿಂದ ಏನನೂ ಕಾಣಲಾರೆ ನಾನು
ಎಲ್ಲ ಸ್ಥಳ, ಅವಕಾಶಗಳ ತುಂಬುವವ ನೀನು
ಆದರೆ ಅವಕಾಶ ಅರಿತಿಲ್ಲ ನೀನೆಲ್ಲಿರುವಿಯೆಂದು
ನನ್ನ ಇರುವಿಕೆಯಲ್ಲೇ ನನ್ನ ವಿನಾಶವಿದೆ
ನಾನು ನಾಶವಾದರೆ ನಾನು ನೀನಾಗಿ ಉಳಿಯುವೆ.
೩.
ಅವ ಮುಟ್ಟದೆಯೇ ಮಾಡಬಲ್ಲ
ಸಂಧಿಸದೇ ಸಲಹೆ ನೀಡಬಲ್ಲ
ಕೈತೋರದೇ ದಾರಿ ಅರುಹಬಲ್ಲ
ಆಸೆಗಳು ಅವನೊಡನೆ ವಿವಾದಕ್ಕಿಳಿಯಲಾರವು
ಯೋಚನೆ ಅವನೊಂದಿಗೆ ಮಿಳಿತವಾಗಲಾರದು:
ಅವನದು ಅರ್ಹತೆಯ ಅಗತ್ಯವಿಲ್ಲದ ತತ್ವ
ಪ್ರಯತ್ನವಿಲ್ಲದೆ ನಡೆವ ಕ್ರಿಯೆ
೪.
ನಿನ್ನ ಆತ್ಮ ನನ್ನದರಲ್ಲಿ ಲೀನವಾಗಿದೆ
ಮಧು ಶುದ್ಧ ನೀರಿನಲ್ಲಿ ಬೆರೆತ ಹಾಗೆ
ಯಾವುದಾದರೂ ನಿನ್ನ ಮುಟ್ಟಿದಲ್ಲಿ
ಅದು ನನ್ನನೂ ಮುಟ್ಟುತ್ತದೆ
ಬಿಡು, ಹೇಗಿದ್ದರೂ ನಾನು ನೀನೇ..
೫.
ಉದಯ ಸೂರ್ಯನೆದುರು ಹಿಡಿದ ರತ್ನಮಣಿ ನಾನು
ಅದಿನ್ನೂ ಕಲ್ಲೇ? ಅಥವಾ
ಕಡುಕೆಂಪಿನ ಒಂದು ಜಗತ್ತೇ?
ರತ್ನಮಣಿ ಸೂರ್ಯಕಿರಣಗಳ ತಡೆಯಲಾರದು..
ಮನ್ಸೂರ್ ಅಲ್ ಹಲ್ಲಜ್ (ಕ್ರಿ.ಶ.೮೫೮ - ೯೨೨)
|
Saturday, 13 July 2013
Subscribe to:
Post Comments (Atom)
No comments:
Post a Comment