ಶ್ರದ್ಧಾಂಜಲಿ
ಅಯ್ಯಯ್ಯಯ್ಯ!
ಇದೇನಿದು ಗದ್ಲ ಹಿಂಗ್ ಲಬೊಲಬೊ ಅಂತ..!
ಓ ಟೆಲಿಗ್ರಾಮಜ್ಜ ಹೋದ್ನ?
ಛೆ ಪಾಪ, ಏನಾಗಿತ್ತಂತ?
ಓ ವಯಸ್ಸಾಗಿತ್ತಾ?
ಇರ್ಲಿ ಬಿಡ್ರಿ ಏನ್ಮಾಡಾಕಾಗುತ್ತೆ
ತಂತಮ್ಮ ಕಾಲ ಕಳದ ಮೇಲೆ
ಎಲ್ರೂ ಹೋಗ್ಲೇಬೇಕ್ ತಾನೇ
ಪುತುಪುತು ಜೀವಗಳೇ ಉದುರ್‍ತಿದಾವೆ
ಉದುರ್‍ದೇ ಚಿಗುರದೆಂಗೆ ಭೂಮಿ ಮ್ಯಾಲೆ?
ಒನಕಿ ರುಬ್ಬಕಲ್ಲು ಅಸ್ತ್ರೊಲೆ ಈಳಿಗಿ
ಬೀಸೆಕಲ್ಲು ಹಾರೆ ಕುಟ್ಟಾಣಿ ಹರವಿ
ಹೆಸರರೆ ನೆನಪಿದಾವಿಲ್ಲೋ?
ವರ್ಷೊರ್ಷ ತೇರಿಗಿ ಬರತಿದ್ವು
ಅವನೆಲ್ಲ ಗ್ಯಾಸ್ನಲ್ಲಿ ಸುಟ್ಟು
ಗೋರಿಕಲ್ಲು ನಿಲ್ಸಿಬಿಟ್ಟಿದೀವಿ
ಹದನಾರು ಮಳ ಮಗ್ಗದ ಸೀರಿ
ಕಳೇವಾರ ಕುಬಸ ಲಂಗ ದಾವಣಿ
ಪಂಜಿ ಪೇಟ ಲುಂಗಿ ಟೊಪಿಗಿ
ಇರತಿದ್ವೊ ಇಲ್ಲೊ ಕುಬಸದೋರ ಅಂಗಡೀಲಿ?
ಮಗ್ಗದೋನ ಸಮೇತ ಹೊಳಿ ಹಾರಿ
ಈಗ ಪ್ಯಾಂಟು ಶರಟಿಂದೇ ಕಾರುಬಾರಿ
ಬುಗುರಿ ಚಿಣ್ಣಿದಾಂಡು ಲಗೋರಿ
ಪಗಡೆ ಬಿಕ್ಕ ಚನ್ನೆಮಣಿ ಗೋಲಿ
ಕುಂಟಬಿಲ್ಲೆ ಕೋಕೋ ಮರಗೋತಿ
ಎಷ್ಟ್ ಆಟ ಆಡತಿದ್ವಿ
ಕ್ರಿಕೆಟ್ ಬ್ಯಾಟಿಗೆ ಎಲ್ಲ ಅಡ ಇಟ್ಟುಬಿಟ್ವಿ
ಪಾಟಿಬಳಕಡ್ಡಿ ವಾಲೆಗರಿ
ಅಚ್ಚು ಮೊಳೆ ಮಸಿ ದವತಿ
ಮೂಟೆಕಟ್ಟಿ ಮಾರಿದ್ವಿ ಬಾಲಪೆನ್ನಿನ ಸಂತೀಗಿ
ಈಗಂತ್ರೂ ಮುಟ್ಟಿದ್ರೇ ಬರಕಳವಂತ ಪಾಟಿ..
ಯಕ್ಕೋ ಯಣ್ಣೋ
ಹೇಳ್ತಾ ಹೋದ್ರೆ ಹಿಂಗೇ ಎಲ್ಲಾ.
ವಯಸ್ಸಾದೋರು ಆಯಸ್ಸಿಲ್ದೋರು
ಬದುಕಕ್ಕಾಗದೋರು ತೀರ್‍ಕಳದೇ
ಒಂದಲ್ಲ ಒಂಜಿನಾ.
ಹಂಗಿರತ ಈ ಅಜ್ಜ ಸತ್ತನಂತ ಅಷ್ಟ್ಯಾಕ್ ಲಬಲಬ?
ಇದೇನ್ ದುಕ್ಕಾನೋ ಅತವಾ ಕಟ್ಟಿದ ಯಾಸ?
ಆತು, ಒಂದ್ ಮಾತ್ ಕೇಳಲ್ಯೆ?
ಟೆಲಿಗ್ರಾಮಜ್ಜ ಬದುಕ್ಲಿ ಅಂತ ನೀವು
ಗುಳಿಗಿ ಮದ್ದೇನರೆ ತಂದ್ ಕೊಟ್ರೆನು?
ಶೀಕು ಸಂಕ್ಟಂತ ಆಸಪತ್ರಿಗಿ ಒಯ್ದಿರೆನು?
ಇಲ್ಲಂದ್ರ ಕೂರ್ರಿ ಮತ್ ಬಾಯ್‌ಮುಚ್ಕಂಡು
ಅಷ್ಟಕೂ ಎಲ್ ಹೋಗೈತೆ ಯಣಾ ಟೆಲಿಗ್ರಾಮು?
ಅವ್ನ ಮರಿಮಗ ಅವ್ನು, ನಿನ ಕೈಲಿ ಮೆರೆಯೋ ಮೆಸೇಜು
ಚಳಿಲ್ಲ ಮಳಿಲ್ಲ ಬೆಟ್ಟವಿಲ್ಲ ಬೇಸಿಗಿಲ್ಲ
ಅಲಿತಾನೆ ಅವ ‘ಪೋಸ್ಟ್‌ಮ್ಯಾನ್ ಇನ್ ದಿ ಮೌಂಟೆನ್ನು..’
- ಮಂಕಾಳಿ
ella ellaa maayavaadavu Haleya palakeya mukhagaLu!
ReplyDelete